ಮಂಗಳೂರು, ಆ.26(Daijiworld News/SS): ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಮಲೇರಿಯಾ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಇಲ್ಲಿನ ಜನರನ್ನು ಆತಂಕಕ್ಕೀಡುಮಾಡಿದೆ. ಕರಾವಳಿಯಲ್ಲಿ ಸದ್ಯ ಮಳೆ ಬಿಟ್ಟೂ ಬಿಟ್ಟು ಬರುತ್ತಿದ್ದು, ಆಗಾಗ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಇದು ಸೊಳ್ಳೆ ಸಂತಾನಾಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಿ ಮತ್ತೆ ಡೆಂಗ್ಯೂ ಉಲ್ಬಣಿಸಲು ಕಾರಣವಾಗುತ್ತಿದೆ.
ಈ ಕುರಿತು ಮಾತನಾಡಿರುವ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ನವೀನ್ಚಂದ್ರ, ಶಂಕಿತ ಡೆಂಗ್ಯೂವಿನಿಂದ ಇದುವರೆಗೆ 11 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 6 ಮಂದಿಯ ರಕ್ತವನ್ನು ಎಲಿಸಾ ಪರೀಕ್ಷೆಗೆ ಕಳುಹಿಸಲಾಗಿದೆ. ಉಳಿದವರ ರಕ್ತವನ್ನೂ ಪರೀಕ್ಷೆಗೆ ಕಳುಹಿಸಲಾಗುವುದು. ಜಿಲ್ಲೆಯಲ್ಲಿ ಪ್ರಾಥಮಿಕ ಪರೀಕ್ಷೆಯಲ್ಲಿ ಡೆಂಗ್ಯೂ ಪಾಸಿಟಿವ್ ಎಂಬ ವರದಿ ಬಂದಿರಬಹುದು, ಆದರೆ ಅದೆಲ್ಲವೂ ಡೆಂಗ್ಯೂ ಎಂದು ದೃಢಪಡಿಸಲಾಗದು ಎಂದು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ 152 ಮತ್ತು ಮಲೇರಿಯಾ ಪ್ರಕರಣ 63ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರತೀ ದಿನ 50ರಿಂದ 70 ಮಂದಿ ಡೆಂಗ್ಯೂ ಬಾಧಿತರಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಡೆಂಗ್ಯೂ ಸೋಂಕಿತ ವ್ಯಕ್ತಿಯ ಪ್ಲೇಟ್ಲೆಟ್ ಗಣನೀಯವಾಗಿ ಇಳಿಕೆಯಾದಾಗ ಸಂದರ್ಭಕ್ಕೆ ತಕ್ಕಂತೆ ಡೆಂಗ್ಯೂ ಸೋಂಕಿನ ವಿರುದ್ಧ ಸೆಣಸುವ ಪ್ಲೇಟ್ಲೆಟ್ ನೀಡುವುದು ಅನಿವಾರ್ಯ. ಬೇಡಿಕೆ ಹೆಚ್ಚಾದ ಕಾರಣ ಬ್ಲಡ್ ಬ್ಯಾಂಕ್ಗಳಿಗೆ ಪ್ಲೇಟ್ಲೆಟ್ ಸಂಗ್ರಹ ಸವಾಲಾಗಿದೆ. ಸೋಂಕಿತರು ಆಸ್ಪತ್ರೆಗೆ ದಾಖಲಾಗುವಾಗ ರಕ್ತದ ವ್ಯವಸ್ಥೆ ಮಾಡಿಕೊಂಡೇ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸದ್ಯ ಡೆಂಗ್ಯೂ ಸೋಂಕಿಗೆ ತುತ್ತಾಗಿ ಕೇರಳ, ಹೊರ ಜಿಲ್ಲೆಗಳಿಂದಲೂ ರೋಗಿಗಳು ಮಂಗಳೂರಿನ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಾರೆ. ಕೇರಳ, ಹೊರ ಜಿಲ್ಲೆಗಳಿಂದ ಬಂದ ರೋಗಿಗಳ ಸಂಬಂಧಿಕರು ರಕ್ತದಾನಿಗಳನ್ನು ಒಂದುಗೂಡಿಸಲು ಹರಸಾಹಸಪಡುತ್ತಿದ್ದಾರೆ.