ಬೆಂಗಳೂರು,ಆ 25 (Daijiworld News/RD): ತನ್ನ ಮಗ ಮತ್ತು ಸೊಸೆಯ ಕಿರುಕುಳ ತಾಳಲಾರದೆ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ. ಮೃತರು 70 ವರ್ಷದ ಕೃಷ್ಣಮೂರ್ತಿ ಮತ್ತು ಅವರ ಪತ್ನಿ 68 ವರ್ಷದ ಸ್ವರ್ಣ ಎಂದು ಗುರುತಿಸಲಾಗಿದೆ.
ಸ್ವರ್ಣ ವಿಷ ಸೇವಿ ಆತ್ಮಹತ್ಯೆ ಮಾಡಿಕೊಂಡರೆ ಕೃಷ್ಣಮೂರ್ತಿ ವಿಷ ಸೇವಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗ ಮತ್ತು ಸೊಸೆಯಿಂದ ಪ್ರತಿನಿತ್ಯ ಕಿರುಕುಳ ಅನುಭವಿಸುತ್ತಿದ್ದೆವು. ಇವರ ಹಿಂಸೆಯನ್ನು ಸಹಿಸಲಾಗದೆ ಈ ರೀತಿಯ ಕ್ರಮ ತೆಗೆದುಕೊಂಡಿರುವುದಾಗಿ, ಮನೆಯ ಗೋಡೆಯ ಮೇಲೆ ಡೆತ್ ನೋಟ್ ನಲ್ಲಿ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಗ ಮತ್ತು ಸೊಸೆ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಈ ಘಟನೆ ಬೆಳಕಿಗೆ ಬಂದಿದೆ. ಕಾಲಿಂಗ್ ಬೆಲ್ ಒತ್ತಿದರೂ, ಬಾಗಿಲು ಬಡಿದರೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದ ವೃದ್ಧ ದಂಪತಿ, ತಕ್ಷಣ ಕಿಟಕಿ ಮೂಲಕ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸಾಯುವುದಕ್ಕೆ ಮುನ್ನ ಕೃಷ್ಣಮೂರ್ತಿ ಗೋಡೆಯಲ್ಲಿ ಡೆತ್ ನೋಟ್ ಬರೆದು ಅಂಟಿಸಿದ್ದರು. ಅದರಲ್ಲಿ ನಮ್ಮ ಸಾವಿಗೆ ಮಗ ಮತ್ತು ಸೊಸೆಯ ಹಿಂಸೆಯೇ ಕಾರಣ, ನಾವು ಇವರ ಕಿರುಕುಳದಿಂದ ತೀವ್ರ ನೊಂದು ಹೋಗಿದ್ದೇವೆ ಎಂದು ಬರೆದಿದ್ದರು. ಸ್ವರ್ಣ ಬೆನ್ನು ನೋವಿನಿಂದ ಬಳಲುತ್ತಿದ್ದು ಸಂಪೂರ್ಣ ಹಾಸಿಗೆ ಹಿಡಿದಿದ್ದರು. ಮನೆಕೆಲಸಕ್ಕೆ ಮಹಿಳೆಯರು ಬಂದರೂ ಸಹ ಅವರು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ, ಹಾಗಾಗಿ ಅವರನ್ನು ಪದೇ ಪದೇ ಕೆಲಸದಿಂದ ತೆಗೆದುಹಾಕುತ್ತಿದ್ದರು. ಹೀಗಾಗಿ ಕೃಷ್ಣಮೂರ್ತಿಯವರೇ ಪತ್ನಿಯನ್ನು ನೋಡಿಕೊಳ್ಳುತ್ತಿದ್ದರು. ಮಗ ಮತ್ತು ಸೊಸೆ ಪದೇ ಪದೇ ಜಗಳವಾಡುತ್ತಿದ್ದು, ತಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ ಎಂಬ ಭಯ ಈ ದಂಪತಿಗಿತ್ತು. ಇದರಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.