ಮಂಗಳೂರು, ಆ.24(Daijiworld News/SS): ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಅರುಣ್ ಮಹಾರಾಜ್ ಕಿಶನ್ ಜೇಟ್ಲಿ ನಿಧನಕ್ಕೆ ಮಂಗಳೂರಿನ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಅವರು, ಅರುಣ್ ಜೇಟ್ಲಿಯವರು ಭಾರತೀಯ ಜನತಾ ಪಕ್ಷದ ಏಳಿಗೆಗಾಗಿ ತನ್ನ ಜೀವನವನ್ನು ಶ್ರೀಗಂಧದಂತೆ ತೇಯ್ದು ಪಕ್ಷದ ಸೌಗಂಧವನ್ನು ಭಾರತದ ಎಲ್ಲೆಡೆ ಪಸರಿಸಿದ್ದಾರೆ. ತನ್ನ ಜೀವನದ ಉದ್ದಕ್ಕೂ ರಾಜಕೀಯದ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಎಂದೂ ರಾಜಿಯಾದವರಲ್ಲ. ಪಕ್ಷದ ಸದೃಢತೆಗಾಗಿ ತಮ್ಮ ರಾಜಕೀಯ ಜೀವನದ ಪ್ರಾರಂಭದಿಂದಲೂ ಶ್ರಮಿಸಿದ ಧೀಮಂತ ನಾಯಕ. ಅವರ ಅಗಲಿಕೆ ಅಪಾರ ನೋವು ತಂದಿದೆ ಮತ್ತು ಪಕ್ಷಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಹೇಳಿದರು.
ಇನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಅರುಣ್ ಜೇಟ್ಲಿ ನಿಧನಕ್ಕೆ ಸಂತಾಪ ಸೂಚಿಸಿದ್ದು, ಬಿಜೆಪಿಯ ಅತ್ಯಂತ ಪ್ರಭಾವಿ ಹಾಗೂ ಚಾಣಾಕ್ಷ ರಾಜಕಾರಣಿ ಅರುಣ್ ಜೇಟ್ಲಿ. ಅವರು ದೇಶಕಂಡ ಅಪರೂಪದ ರಾಜಕಾರಣಿಯಾಗಿದ್ದರು. ಅರುಣ್ ಜೇಟ್ಲಿಯವರ ಸಾವು ನಮಗೆಲ್ಲಾ ಆಘಾತ ಉಂಟು ಮಾಡಿದೆ. ಪ್ರಭಾವಿ ರಾಜಕಾರಣಿಯನ್ನು ಕಳೆದುಕೊಂಡು ರಾಷ್ಟ್ರ ಸೇರಿದಂತೆ ಪಕ್ಷಕ್ಕೂ ನಷ್ಟ ಆಗಿದೆ. ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಭಗವಂತ ನೀಡಲಿ ಎಂದು ಹೇಳಿದರು.
ಅರುಣ್ ಜೇಟ್ಲಿ ಪಕ್ಷಾತೀತವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ವ್ಯಕ್ತಿ. ಭಾರತದ ರಾಜಕಾರಣಕ್ಕೆ ಜೇಟ್ಲಿಯವರ ಕೊಡುಗೆ ಅಪಾರ. ಜೇಟ್ಲಿ ಅವರು ಬಿಜೆಪಿಗೆ ನೀಡಿರುವ ಸೇವೆಯನ್ನು ಯಾರೂ ಮರೆಯಲಾಗದು. ಇಂದಿನ ರಾಜಕಾರಣಿಗಳಿಗೆ ಅವರು ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ.