ಮಂಗಳೂರು, ಆ.24(Daijiworld News/SS): ಪ್ಲಾಸ್ಟಿಕ್ ಫ್ಲೆಕ್ಷ್'ಗಳ ಬದಲಿಗೆ ಬಟ್ಟೆಯಿಂದ ತಯಾರಿಸಿದ ಬ್ಯಾನರ್'ಗಳನ್ನು ಬಳಸಲು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಸಲಹೆ ನೀಡಿದ್ದಾರೆ.
ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಹೀಗಾಗಿ ಪ್ರಧಾನಿಯವರ ಸಲಹೆಯನ್ನು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಾವು ಅಭಿಯಾನವನ್ನಾಗಿ ಸ್ವೀಕರಿಸಿದ್ದೇವೆ ಎಂದು ಹೇಳಿದ್ದಾರೆ.
ನನ್ನ ಮೇಲಿನ ಅಭಿಮಾನದಿಂದ ಸ್ಥಳೀಯ ನಾಗರಿಕರು, ಪಕ್ಷದ ಕಾರ್ಯಕರ್ತರು ಫ್ಲೆಕ್ಷ್ ಹಾಕುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಆ ಫ್ಲೆಕ್ಷ್'ಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯಾಗುವುದರಿಂದ ಅದು ಪರಿಸರಕ್ಕೆ ಹಾನಿ ಉಂಟು ಮಾಡುತ್ತದೆ. ಇದರ ಬದಲು ಬಟ್ಟೆಯಿಂದ ತಯಾರಿಸಿದ ಬ್ಯಾನರ್'ಗಳನ್ನು ಬಳಸಿ. ಇದರಿಂದ ಪ್ಲೆಕ್ಸ್ ತಯಾರಕ ವೃತ್ತಿಗೆ ಹಿನ್ನಡೆಯಾಗಿ ಅವರು ನಿರುದ್ಯೋಗಿಗಳಾಗುತ್ತಾರೆ ಎನ್ನುವ ಚಿಂತೆ ಬೇಡ. ಫ್ಲೆಕ್ಸ್'ಗಳ ಬದಲಿಗೆ ಬಟ್ಟೆಯಿಂದ ತಯಾರಿಸಿದ ಬ್ಯಾನರ್'ಗಳನ್ನು ಬಳಸುವುದರಿಂದ ಉದ್ಯಮಿಗಳಿಗೂ ಅದರ ನೌಕರರಿಗೂ ಎಳ್ಳಷ್ಟು ಸಮಸ್ಯೆಯಾಗದು ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಅಭಿಮಾನಿಗಳು ಫ್ಲೆಕ್ಷ್'ಗಳನ್ನು ಹಾಕಲು ಇಚ್ಚಿಸಿದ್ದಲ್ಲಿ ದಯವಿಟ್ಟು ಬಟ್ಟೆಯಿಂದ ನಿರ್ಮಿಸಲಾದ ಫ್ಲೆಕ್ಷ್ ಬಳಸುವುದು ಉತ್ತಮ. ಫ್ಲಾಸ್ಟಿಕ್ ನಿಷೇಧದ ನಮ್ಮ ಅಭಿಯಾನ ಯಶಸ್ವಿಯಾಗಲು ನಿಮ್ಮ ಸಹಕಾರ ಅಗತ್ಯ ಎಂದು ಹೇಳಿದ್ದಾರೆ.