ಉಡುಪಿ, ಆ 23 (DaijiworldNews/SM): ಬುದ್ಧಿವಂತರು, ಸುಶಿಕ್ಷಿತರ ಜಿಲ್ಲೆ ಎಂದು ಹೆಸರು ಪಡೆದುಕೊಂಡಿರುವ ಉಡುಪಿ ಜಿಲ್ಲೆಯಲ್ಲಿ ಅದೆಷ್ಟೋ ಅಲೆಮಾರಿ ಕಾರ್ಮಿಕರು ದಿನನಿತ್ಯದ ಹೊಟ್ಟೆಪಾಡಿಗಾಗಿ ಕೂಲಿನಾಲಿ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ. ಇಲ್ಲಿಗ ಆಗಮಿಸುವ ನಿರಾಶ್ರಿತರಿಗೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ. ಇದೇ ಕಾರಣದಿಂದಾಗಿ ರಸ್ತೆ ಪಕ್ಕದಲ್ಲಿ ಸಿಕ್ಕ ಸಿಕ್ಕ ಜಾಗದಲ್ಲಿ ನೆಲೆ ಕಂಡುಕೊಂಡಿದ್ದಾರೆ.
ಹೊರ ಜಿಲ್ಲೆಯಿಂದ ಬಂದ ಕೂಲಿ ಕಾರ್ಮಿಕರು ಉಡುಪಿ ಕರಾವಳಿ ಜಂಕ್ಷನ್ ನ ರಾಷ್ಟ್ರೀಯ ಹೆದ್ದಾರಿ ಬಳಿ ತಮ್ಮ ನೆಲೆ ಕಂಡುಕೊಂಡಿದ್ದಾರೆ. ಸಣ್ಣ ಪುಟ್ಟ ಜೋಪಡಿಗಳನ್ನು ನಿರ್ಮಿಸಿ ವಾಸಿಸುತ್ತಿದ್ದಾರೆ. ಸುರಿಯುತ್ತಿರುವ ಬಿರುಸಿನ ಮಳೆಗೆ ಇವರ ಬದುಕು ಶೋಚನೀಯವಾಗಿದೆ. ಈ ಹಿಂದೆ ಇದೇ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ಜೀವನ ನಡೇಸುತ್ತಿದ್ದರು.
ಅವರಿಗೆ ರಾಷ್ಟ್ರಿಯೇ ಹೆದ್ದಾರಿ ರಸ್ತೆಯೇ ನಿತ್ಯಕರ್ಮಗಳಿಗೆ ಜಾಗವಾಗಿದೆ. ಮಳೆಯ ನೀರನ್ನೇ ಸ್ನಾನಕ್ಕೆ ಬಳಸುತ್ತಿದ್ದಾರೆ. ಈ ಹೆದ್ದಾರಿಯಲ್ಲಿ ಪ್ರತಿ ನಿತ್ಯ ಅದೆಷ್ಟು ರಾಜಕಾರಣಿಗಳು ಸರ್ಕಾರಿ ಅಧಿಕಾರಿಗಳು ಸಂಚಾರ ನಡೆಸುತ್ತಿದ್ದು, ಕಣ್ಣಿದ್ದು ಕುರುಡರಾಗಿದ್ದಾರೆ. ಮಹಿಳೆಯರು ರಸ್ತೆ ನಡುವಿನ ಹಳ್ಳದಲ್ಲಿ ಶೇಖರಿಸಿದ್ದ ನೀರನ್ನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಟ್ಟೆ ಒಗೆಯಲು ಉಪಯೊಗಿಸುತ್ತಿದ್ದಾರೆ. ಅಲ್ಲದೆ ರಸ್ತೆಯಲ್ಲಿಯೇ ಅರೆ ನಗ್ನರಾಗಿ ಸ್ನಾನ ಮಾಡುವ ಅನಿವಾರ್ಯತೆಯೂ ಕೂಡ ಇವರಿಗಿದೆ.
ಇದರ ಪಕ್ಕದಲ್ಲಿಯೇ ಗಬ್ಬು ಕೊಳೆತು ನಾರುತ್ತಿರುವ ಕಸದ ಕೊಂಪೆಯಿದೆ. ಹಲವಾರು ಪುಟ್ಟ ಮಕ್ಕಳು ಅವರೊಂದಿಗೆ ವಾಸಿಸುತ್ತಿದೆ. ಇದರಿಂದಾಗಿ ಇವರಿಗೆ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಮೊದಲೆ ಕಲುಷಿತ ನೀರಿನಿಂದ ಹಲವಾರು ಖಾಯಿಲೆಗಳು ಬರುತ್ತಿವೆ. ಇನ್ನು ನಿತ್ಯವೂ ರಸ್ತೆಯಿಂದ ಹರಿದು ಬರುವ ಹಳ್ಳದ ನೀರನ್ನು ಬಳಸುತ್ತಿರುವ ವಲಸೆ ಕಾರ್ಮಿಕರ ಆರೋಗ್ಯ ಊಹಿಸಲು ಅಸಾಧ್ಯವಾಗಿದೆ. ಅಲ್ಲದೆ ಸರ್ವಿಸ್ ಬಸ್ಸ ಗಳಂತೂ ಯಮನಂತೆ ರಸ್ತೆಯಲ್ಲಿ ಓಡಾಡುತ್ತವೆ. ಆ ಗುಡಿಸಲುಗಳು ಸರ್ವಿಸ್ ರಸ್ತೆಯ ಪಕ್ಕವೇ ಇರುವುದರಿಂದ ಏನಾದರೂ ಅಪಾಯ ಸಂಭವಿಸುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಜನನಾಯಕರು ಎಚ್ಚೆತ್ತುಕೊಂಡು ವಲಸೆ ಕಾರ್ಮಿಕರಿಗೆ ಸೂಕ್ತ ವಸತಿ ಸೌಲಭ್ಯ ಒದಗಿಸುವ ಅಗತ್ಯತೆ ಇದೆ.