ಕುಂದಾಪುರ, ಆ 23 (Daijiworld News/MSP): ರಾಜ್ಯದಲ್ಲಿ ಯಡಿಯೂರಪ್ಪನವರ ಸರ್ಕಾರ ಅಧಿಕಾರಕ್ಕೆ ಮೂರೇ ದಿನದಲ್ಲಿ ಮೀನುಗಾರರ 60 ಕೋಟಿ ಸಾಲ ಮನ್ನಾ ಮಾಡಿದೆ. ಆದರೆ ಮೀನುಗಾರ ಸ್ವಸಹಾಯ ಸಂಘದ ಸದಸ್ಯರಲ್ಲಿ ಇನ್ನು ಸಾಲ ಪಾವತಿಸಬೇಕೇ ಎನ್ನುವ ಗೊಂದಲವಿದೆ.
ಈ ಬಗ್ಗೆ ಮುಖ್ಯಮಂತ್ರಿಗಳು, ಮೀನುಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಜೊತೆ ಸಭೆ ನಡೆಸಿ ಎರಡು ಮೂರು ದಿನದಲ್ಲಿ ಈ ಗೊಂದಲ ಪರಿಹಾರ ಮಾಡಲಾಗುವುದು. ಮೀನುಗಾರರು ಸಾಲವನ್ನು ಕ್ಲಪ್ತ ಸಮಯದಕ್ಕೆ ಬ್ಯಾಂಕಿಗೆ ಪಾವತಿಸಬೇಕು. ಸಾಲ ಮನ್ನಾದ ಮೊತ್ತ ಹಿಂದೆ ಬಡ್ಡಿ ಸಹಾಯಧನ ಸದಸ್ಯರ ಖಾತೆಗೆ ಜಮಾ ಆದಂತೆ ಈ ಸಾಲಮನ್ನಾದ ಮೊತ್ತವೂ ಖಾತೆಗೆ ಜಮಾ ಆಗಲಿದೆ ಎಂದು ದ.ಕ., ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಲಿ., ಮಂಗಳೂರು ಇದರ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಹೇಳಿದರು.
ಕುಂದಾಪುರದ ಶ್ರೀನಾರಾಯಣಗುರು ಕಲ್ಯಾಣ ಮಂಟಪದಲ್ಲಿ ನಡೆದ ಜೈ ಕರ್ನಾಟಕ ಚಿಲ್ಲರೆ ಮೀನು ವ್ಯಾಪಾರಸ್ಥರ ಸಂಘ ಕುಂದಾಪುರ ಇದರ 10 ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಅವಿಭಜಿತ ಜಿಲ್ಲೆಗೆ ಮುಖ್ಯಮಂತ್ರಿಗಳನ್ನು ಕರೆಸಿ ಮೀನುಗಾರರ ವತಿಯಿಂದ ಅಭಿನಂದಿಸುವ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಸಂದರ್ಭ ಮೀನುಗಾರರ ಪ್ರಮುಖ ಬೇಡಿಕೆಗಳಾದ ಸ್ವಸಹಾಯ ಗುಂಪುಗಳ 50 ಸಾವಿರ ಸಾಲವನ್ನು 1 ಲಕ್ಷಕ್ಕೆ ಏರಿಸುವುದು, ಮೀನುಮಾರುಕಟ್ಟೆ ಅಭಿವೃದ್ದಿ, ಮತ್ಸ್ಯಾಶ್ರಮ ಯೋಜನೆಯಲ್ಲಿ ಮನೆ ದೊರೆತರೂ ಸಿಆರ್ಜೆಡ್ ಸಮಸ್ಯೆಗೆ ಪರಿಹಾರ ಸೇರಿದಂತೆ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದಿಡಲಾಗುವುದು ಎಂದರು.
10 ವರ್ಷಗಳ ಹಿಂದೆ ಆರಂಭವಾದ ಜೈ ಕರ್ನಾಟಕ ಚಿಲ್ಲರೆ ಮೀನು ವ್ಯಾಪಾರಸ್ಥರ ಸಂಘ ಜೈ ಕರ್ನಾಟಕ ಚಿಲ್ಲರೆ ಮೀನು ವ್ಯಾಪಾರಸ್ಥೆ ವಿವಿಧೋದ್ದೇಶ ಸಹಕಾರ ಸಂಘದ ಮೂಲಕ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿದ್ದು, ಲಾಭದಾಯಕವಾಗಿ ಮುನ್ನೆಡೆಯುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.
ಜೈ ಕರ್ನಾಟಕ ಚಿಲ್ಲರೆ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷೆ ರತ್ನಾ ಮೋಗವೀರ ಕೋಟೇಶ್ವರ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕಾ ಉಪ ನಿರ್ದೇಶಕ ಗಣೇಶ ಕೆ., ಕಾರ್ಪೋರೇಶನ್ ಬ್ಯಾಂಕ್ ವಡೇರಹೋಬಳಿ ಶಾಖಾ ಪ್ರಬಂಧಕ ಅಶೋಕ್ ಕುಮಾರ್, ಜೈ ಕರ್ನಾಟಕ ಚಿಲ್ಲರೆ ಮೀನು ವ್ಯಾಪಾರಸ್ಥರ ಸಹಕಾರಿ ಸಂಘದ ಅಧ್ಯಕ್ಷ ಆರ್.ಮಂಜುನಾಥ ಬಾಳಿಕೆರೆ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ, ಜೈ ಕರ್ನಾಟಕ ಚಿಲ್ಲರೆ ಮೀನು ವ್ಯಾಪಾರಸ್ಥರ ಸಂಘ ಗೌರವಾಧ್ಯಕ್ಷ ಕೆ.ಶಂಕರ ಖಾರ್ವಿ, ಸಂಘದ ಉಪಾಧ್ಯಕ್ಷ ಆಸ್ಲಾಂ ಸಾಹೇಬ್ ಉಪಸ್ಥಿತರಿದ್ದರು.
ಉದಯ ಕುಮಾರ್ ಹಟ್ಟಿಯಂಗಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಕಾರ್ಪೋರೇಶನ್ ಬ್ಯಾಂಕ್ ವಡೇರಹೋಬಳಿ ಶಾಖಾ ಪ್ರಬಂಧಕ ಅಶೋಕ್ ಕುಮಾರ್, ಮೀನುಗಾರಿಕಾ ಉಪ ನಿರ್ದೇಶಕ ಗಣೇಶ ಕೆ ಅವರನ್ನು ಸನ್ಮಾನಿಸಲಾಯಿತು.ಸಂಘದ ಕಾರ್ಯದರ್ಶಿ ಜಿನ್ನಾ ಸಾಹೇಬ್ ಸ್ವಾಗತಿಸಿ, ವರದಿ ಮಂಡಿಸಿದರು.