ಮಂಗಳೂರು, ಡಿ 23: ತಿಂಗಳಲ್ಲಿ ಒಂದು ದಿನ ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳು ಬ್ಯಾಗ್ ಹೊತ್ತುಕೊಂಡು ಹೋಗುವ ಹಾಗೆ ಇಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಡಿ. 23 ರಿಂದ ಇದು ಪ್ರಾಯೋಗಿಕವಾಗಿ ಆರಂಭವಾಗಲಿದ್ದು. ಮುಂದಿನ ದಿನಗಳಲ್ಲಿ ಯಾವ ದಿನ ಬ್ಯಾಗ್ ಕೊಂಡು ಹೋಗುವಂತಿಲ್ಲ ಎಂದು ಇಲಾಖೆ ಸ್ಪಷ್ಟವಾಗಿ ತಿಳಿಸಲಿದೆ. ಮಕ್ಕಳು ತಿಂಗಳಲ್ಲಿ ಒಂದು ದಿನ ಪಠ್ಯಪುಸ್ತಕ, ನೋಟ್ಬುಕ್ಗಳ ಹೊರೆ ಇಲ್ಲದೇ ಶಾಲೆಗಳತ್ತ ಹೆಜ್ಜೆ ಹಾಕಬಹುದು. ಇಡೀ ದಿನ ಆಟೋಟ, ರಚನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿದೆ.
ಶನಿವಾರ ತಲಾ 45 ನಿಮಿಷದ ಐದು ಅವಧಿಗಳಿದ್ದು, ಪ್ರತಿ ಅವಧಿಯಲ್ಲಿ ರಸಪ್ರಶ್ನೆ, ಆಶುಭಾಷಣ, ಅಣಕು ಸಂಸತ್, ಚರ್ಚಾ ಸ್ಪರ್ಧೆ, ಕರಕುಶಲ ವಸ್ತು, ಕಲಿಕಾ ಉಪಕರಣ ತಯಾರಿ, ಪ್ರಾಯೋಗಿಕ ಕಲಿಕೆ, ಗ್ರಂಥಾಲಯ ಬಳಕೆ, ಕಂಪ್ಯೂಟರ್ ಮೂಲಕ ಕಲಿಕೆ ಹೀಗೆ ಹತ್ತು ಹಲವು ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ.
ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಇಂತಹ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಜಿಲ್ಲೆಯ 2,033 ಸರ್ಕಾರಿ ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸ್ಕೂಲ್ ಬ್ಯಾಗ್ ರಹಿತ ದಿನ ಶನಿವಾರ ಆರಂಭವಾಗಲಿದೆ. ಪ್ರತಿ ತಿಂಗಳ ಕೊನೆಯ ಶನಿವಾರ ಮಕ್ಕಳೆಲ್ಲ ಸಮವಸ್ತ್ರದಲ್ಲಿಯೇ ಶಾಲೆಗೆ ಬರುತ್ತಾರೆ. ಆದರೆ, ಪಠ್ಯಪುಸ್ತಕ, ಬುಕ್ಗಳು ಇರುವುದಿಲ್ಲ. ಬದಲಾಗಿ, ಪಠ್ಯರಹಿತ ಬೋಧನೆಗೆ ಅವಕಾಶ ಕಲ್ಪಿಸಲಾಗುತ್ತದೆ.