ಮಂಗಳೂರು, ಆ 23 (Daijiworld News/MSP): ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಗರ್ಭಿಣಿಯಾಗಿಸಿದ ಪ್ರಕರಣದ ಆರೋಪಿಗೆ 10 ವರ್ಷ ಕಠಿಣ ಸಜೆ ಮತ್ತು ರೂ. 5 ಸಾವಿರ ದಂಡ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹಾಗೂ ಪೋಕ್ಸೊ ವಿಶೇಷ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ. ವಿಶೇಷ ಎಂದರೆ ಈ ಪ್ರಕರಣದಲ್ಲಿ ಸಂತ್ರಸ್ತೆ ಬಾಲಕಿ ಹಾಗೂ ಆಕೆಯ ಹೆತ್ತವರು ಹಾಗೂ ನೆರೆಹೊರೆಯವರು ಎಲ್ಲರೂ ಪ್ರತಿಕೂಲ ಸಾಕ್ಷಿ ನುಡಿದರೂ ಅತ್ಯಾಚಾರಿ ನ್ಯಾಯಾಲಯದಲ್ಲಿ ಶಿಕ್ಷೆಯಿಂದ ಬಚಾವ್ ಆಗಲು ಸಾಧ್ಯವಾಗಲೇ ಇಲ್ಲ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಗಂತುಗೊಳ ನಿವಾಸಿ, ಸದ್ಯ ನಗರದ ಮುಚ್ಚೂರು ನೀರುಡೆ ನಿವಾಸಿ ನಾಗಪ್ಪ (25) ಶಿಕ್ಷೆಗೊಳಗಾದ ಆರೋಪಿ. ಈತ 2016ರ ಏಪ್ರಿಲ್ 21ರಂದು ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ, ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ೧೩ ವರ್ಷದ ಬಾಲಕಿಯ ಮನೆ ಪ್ರವೇಶಿಸಿದ ಆರೋಪಿ, ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ. ಇದಾದ ಬಳಿಕವೂ ಆರೋಪಿ ಪದೇಪದೇ ಆಕೆಯ ಮನೆಗೆ ತೆರಳಿ ಅತ್ಯಾಚಾರ ಎಸಗಿದ್ದು, ಇದರ ಪರಿಣಾಮ ಆಕೆ ಗರ್ಭಿಣಿಯಾಗಿದ್ದಳು. ಬಾಲಕಿ ಅಸ್ವಸ್ಥಳಾದ ವೈದ್ಯರ ಬಳಿ ತಪಾಸಣೆ ನಡೆಸಿದಾಗ ಗರ್ಭಿಣಿಯಾದ ವಿಚಾರ ತಿಳಿದಿತ್ತು. ಆದರೆ ಆ ನಂತರ ಬಾಲಕಿಗೆ ನಾಲ್ಕು ತಿಂಗಳಲ್ಲಿ ಗರ್ಭಪಾತವಾಗಿತ್ತು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಬಜ್ಪೆ ಠಾಣೆಯ ಹಿಂದಿನ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಈ ಸಂದರ್ಭ ಭ್ರೂಣದ ಡಿಎನ್ ಎ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಆಕೆ ಗರ್ಭಿಣಿಯಾಗಲು ನಾಗಪ್ಪನೇ ಕಾರಣ ಎಂಬುವುದು ದೃಢಪಟ್ಟಿತ್ತು. ಮೊದಲಿಗೆ ಹೆತ್ತವರು ದೂರು ದಾಖಲಿಸಿದ್ದರೂ ಕೊನೆ ಹಂತದಲ್ಲಿ ಸಂತ್ರಸ್ತ ಬಾಲಕಿ ಹಾಗೂ ಆಕೆಯ ಪೋಷಕರು ಮತ್ತು ನೆರೆಹೊರೆಯವರು ಪೂರಕವಾದ ಸಾಕ್ಷ್ಯ ಹೇಳಿರಲಿಲ್ಲ. ಆದರೆ ಸಂತ್ರಸ್ತೆ ಬಾಲಕಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ವೈದ್ಯಾಧಿಕಾರಿ ಹಾಗೂ ತನಿಖಾಧಿಕಾರಿಗಳು ಹೇಳಿದ ಹೇಳಿಕೆ ಮತ್ತು ವರದಿಯನ್ನು ಪರಿಗಣಿಸಿ ಆರೋಪಿಯನ್ನು ತಪ್ಪಿತಸ್ಥ ಎಂಬುದು ಸಾಬೀತಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್. ಪಲ್ಲವಿ, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ 10 ವರ್ಷ ಕಠಿಣ ಸಜೆ ಮತ್ತು ರೂ. 5ಸಾವಿರ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು.