ಉಡುಪಿ, ಆ.23(Daijiworld News/SS): ಕರಾವಳಿಯ ಎಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕೃಷ್ಣನ ಊರಾದ ಉಡುಪಿಯಲ್ಲಿ ವಿಶೇಷ ಪೂಜೆಗಳ ಮೂಲಕ ವೈಭವದಿಂದ ಕೃಷ್ಣ ಜನ್ಮಾಷ್ಟಮಿ ನಡೆಸಲಾಗುತ್ತಿದೆ. ಉಡುಪಿಯ ಶ್ರೀಕೃಷ್ಣ ಜನ್ಮಾಷ್ಟಮಿಗೂ ಹುಲಿವೇಷ ಕುಣಿತಕ್ಕೂ ಅವಿನಾಭವ ಸಂಬಂಧ. ವಿಟ್ಲಪಿಂಡಿ ಉತ್ಸವದ ದಿನ ಶ್ರೀಕೃಷ್ಣ ಮಠದ ಪರಿಸರದಲ್ಲಿ ಹುಲಿವೇಷಧಾರಿಗಳ ಕುಣಿತವನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಸಂಭ್ರಮದ ಹಬ್ಬದಲ್ಲಿ ಮತ್ತೆ ಕರಾವಳಿಯ ಕೃಷ್ಣ ಭಕ್ತರಿಗೆ ಕಾಡುತ್ತಿದೆ ಶಿರೂರು ಲಕ್ಷ್ಮೀವರ ತೀರ್ಥರ ನೆನಪು.
ಹೌದು ಕೃಷ್ಣಜನ್ಮಾಷ್ಟಮಿ, ವಿಟ್ಲಪಿಂಡಿ, ಸಪ್ತೊತ್ಸವ, ಚೂರ್ಣೋತ್ಸವ, ಗಣೇಶನ ಹಬ್ಬ ಬಂತೆಂದರೆ ತಕ್ಷಣ ಎಲ್ಲರ ಮನದಲಿ ಮೊದಲಿಗೆ ಮೂಡಿ ಬರುವವರು ವರುಷದ ಹಿಂದೆ ಹರಿಪಾದ ಸೇರಿದ ಶ್ರೀ ಶಿರೂರು ಮಠದ ಕೀರ್ತಿಶೇಷ ಶ್ರಿಲಕ್ಷ್ಮಿವರತೀರ್ಥ ಶ್ರೀಪಾದರು. ಸದಾ ಹೊಸ ಚಿಂತನೆಯಿಂದ ಚಟುವಟಿಕೆಯಿಂದ, ಸಜ್ಜನಿಕೆಯಿಂದ, ಪ್ರಮಾಣಿಕವಾದ ಪ್ರೀತಿ ಪ್ರೇಮದಿಂದ, ತಮ್ಮ ಉದಾರವಾದ ಸಹಾಯಹಸ್ತದಿಂದ, ಕಲಾ ಪೋಷಣೆಯಿಂದ ಎಲ್ಲಾ ವರ್ಗದವರ ಗೌರವಕ್ಕೆ ಶಿರೂರು ಶ್ರೀಯವರು ಪಾತ್ರರಾಗಿದ್ದರು. ಶಿರೂರು ಶ್ರೀಯವರು ಇಲ್ಲದ ಉತ್ಸವದ ವೈಭವ ಸಂಭ್ರಮ ಊಹಿಸಲೂ ಅಸಾಧ್ಯ.
ಪ್ರತಿವರ್ಷ ವಿಟ್ಲಪಿಂಡಿ ಉತ್ಸವದ ದಿನ ಶ್ರೀಕೃಷ್ಣಮಠದ ರಾಜಾಂಗಣ ವಾಹನ ನಿಲುಗಡೆ ಪ್ರದೇಶ ಹುಲಿವೇಷಧಾರಿಗಳಿಂದ ತುಂಬಿಹೋಗುತ್ತಿತ್ತು. ಸ್ವತಃ ಶಿರೂರು ಶ್ರೀಗಳೇ ಮುಂದೆ ನಿಂತು ಹುಲಿವೇಷಧಾರಿಗಳಿಗಾಗಿಯೇ ಸುಸಜ್ಜಿತ ವೇದಿಕೆ ನಿರ್ಮಾಣದ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದರು. ಕನಿಷ್ಠ 25ಕ್ಕೂ ಹೆಚ್ಚು ಹುಲಿವೇಷ ತಂಡಗಳು ವಿಟ್ಲಪಿಂಡಿ ಉತ್ಸವದ ದಿನ ರಾಜಾಂಗಣ ವೇದಿಕೆಯ ಮುಂಭಾಗ ಕುಣಿಯುತ್ತಿದ್ದವು. ವೇದಿಕೆ ಮೇಲೆ ಕುಳಿತು ಹುಲಿಕುಣಿತವನ್ನು ಕಣ್ತುಂಬಿಕೊಳ್ಳುತ್ತಿದ್ದ ಶಿರೂರು ಶ್ರೀಗಳು, ಸ್ವತಃ ಡ್ರಮ್ ಬಾರಿಸಿ ಕಲಾವಿದರಿಗೆ ಉತ್ತೇಜನ ನೀಡುತ್ತಿದ್ದರು. ಆದರೆ ಇದೀಗ ಇವಲ್ಲವನ್ನು ಕಣ್ತುಂಬಿಕೊಳ್ಳಲು ಶಿರೂರು ಶ್ರೀಗಳೇ ಇಲ್ಲ.
ತನ್ನ ಎಂಟರ ಎಳೆಯ ಹರಯದಲ್ಲೇ ಸನ್ಯಾಸ ದೀಕ್ಷೆ ಸ್ವೀಕರಿಸಿ ಶ್ರೀ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥರೆಂದು ನಾಮಾಂಕಿತರಾದ ಶ್ರೀಪಾದರು ತದನಂತರ ನಿರಂತರ 48 ವರ್ಷಗಳ ಕಾಲ ಉಡುಪಿಯ ಶ್ರೀಮಧ್ವಾಚಾರ್ಯ ಪ್ರತಿಷ್ಠಿತ ಕಡಗೋಲ ಕೃಷ್ಣಗೆ ಪೂಜಾ ಕೈಂಕರ್ಯಯಗಳನ್ನು ನೆರವೇರಿಸಿದ ಪುಣ್ಯ ಚೇತನ.
ಶ್ರಿಪಾದರಿಗೆ ಕೃಷ್ಣನಿಗೆ ಸಲ್ಲುವ ಷೋಡಶ ಪೂಜೆಗಳಲ್ಲಿ ಅಲಂಕಾರ ಪೂಜೆ ಎಂದರೆ ಅಚ್ಚುಮೆಚ್ಚು. ಎಳೆಯ ಪ್ರಾಯದಿಂದಲೇ ನಿರಂತರವಾದ ವೈವಿಧ್ಯಮಯ ಅಲಂಕಾರಗಳ ಸೇವೆ ಸಲ್ಲಿಸುತ್ತಾ ಸಾಗಿದ ಶ್ರೀಪಾದರು ಕೆಲವೇ ವರ್ಷಗಳಲ್ಲಿ ಕೃಷ್ಣಾಲಂಕಾರದಲ್ಲಿ ಸಿದ್ಧಹಸ್ತರೆನಿಸಿದರು. ಶ್ರಾವಣ ಮಾಸ, ನವರಾತ್ರಿ, ಕೃಷ್ಣಜಯಂತಿ, ನೊಂಪು ಗೀತಾಜಯಂತಿಯ ಹಾಗೂ ಇನ್ನಿತರ ಪರ್ವಕಾಲಗಳಲ್ಲಿ ಶ್ರೀಪಾದರು ಕೃಷ್ಣನಿಗೆ ಅರ್ಪಿಸುತ್ತಿದ್ದ ಅಲಂಕಾರದ ಸೊಬಗನ್ನು ಕಂಡು ನಾಡಿನೆಲ್ಲೆಡೆಯಿಂದ ಆಗಮಿಸುತ್ತಿದ್ದ ಭಕ್ತರು ಭಾವುಕರಾಗುತ್ತಿದ್ದರು. ಅಷ್ಟೊಂದು ನಿಖರತೆ, ನೈಪುಣ್ಯತೆ, ಜೀವಕಳೆ ಅವರು ಸಲ್ಲಿಸುತ್ತಿದ್ದ ಅಲಂಕಾರ ಸೇವೆಯಲ್ಲಿ ತುಂಬಿರುತಿತ್ತು. ಆದರೆ ಇವೆಲ್ಲವೂ ಇದೀಗ ಬರೀ ನೆನಪು ಮಾತ್ರ.
ಕ್ರೀಡೆ, ಸಾಹಿತ್ಯ, ಕಲೆ, ಸಾಂಸ್ಕೃತಿಕ ಕ್ಷೇತ್ರಗಳ ಅನೇಕ ಸಂಘಟನೆಗಳಿಗೆ ಪೋಷಕರಾಗಿದ್ದ ಶ್ರೀಪಾದರಿಗೆ ಇವೆಲ್ಲದರಲ್ಲೂ ಅಪಾರ ಗೌರವ, ಆಸಕ್ತಿ. ಕ್ರೀಡೆ ಸೇರಿದಂತೆ ಕಲಾಕ್ಷೇತ್ರದಲ್ಲಿ ಅಪಾರ ಒಲವು ಇಟ್ಟುಕೊಂಡಿದ್ದ ಶ್ರೀಪಾದರು ಅನೇಕ ಕ್ರೀಡಾ ಪಟುಗಳಿಗೆ, ಕಲಾವಿದರಿಗೆ ಆರ್ಥಿಕವಾಗಿ ಸಹಾಯಹಸ್ತ ನೀಡಿ ಅವರ ಭವಿಷ್ಯಕ್ಕೆ ಬೆಳಕಾಗಿದ್ದರು.
ಹೀಗಾಗಿಯೇ ನಾಡಿನ ಜನತೆಗೆ ಕೃಷ್ಣನ ಹಬ್ಬ ಬಂತೆಂದರೆ ಮೊದಲಿಗೆ ನೆನಪಾಗುವುದು ಸಂಭ್ರಮಕ್ಕೆ ಸಾಟಿಯಿಲ್ಲದ ಶಿರೂರು ಶ್ರೀಪಾದರ ಆದ್ದೂರಿಯ ಕೃಷ್ಣ ಜನ್ಮಾಷ್ಟಮಿ. ಕೃಷ್ಣನ ಈ ಹಬ್ಬವನ್ನು ಶ್ರೀಪಾದರು ಬಹಳ ಪ್ರೀತಿಯಿಂದ ನಾಡಿನ ಎಲ್ಲಾ ಭಕ್ತರನ್ನು ಸೇರಿಸಿಕೊಂಡು ಆಯೋಜಿಸುತ್ತಿದ್ದರು.