ಮಂಗಳೂರು/ಉಡುಪಿ, ಆ.23(Daijiworld News/SS): ಕರಾವಳಿಯ ಎಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿದೆ. ಇಂದು ಕೃಷ್ಣ ಜನ್ಮಾಷ್ಟಮಿ. ನಾಡಿನಾದ್ಯಂತ ಕೃಷ್ಣ ಭಕ್ತರು ಸಂಭ್ರಮದಲ್ಲಿದ್ದಾರೆ. ಎಲ್ಲೆಡೆ ಮಾಧವ, ಮುಕುಂದ, ಮುರಳಿಲೋಲ, ಗೋವರ್ಧನ ಗಿರಿಧರ ಎಂಬಿತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುವ ಪೊಡವಿಗೊಡೆಯ ಶ್ರೀ ಕೃಷ್ಣನ ನಾಮ ಜಪ ನಡೆಯುತ್ತಿದೆ. ಕಡೆಗೋಲು ಕೃಷ್ಣನ ನಾಡು ಉಡುಪಿಯಲ್ಲಿ ಭಗವಾನ್ ಕೃಷ್ಣನ ಆರಾಧನೆ ಆರಂಭವಾಗಿದೆ.
ಕೃಷ್ಣನ ನಾಡು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಜೋರಾಗಿದೆ. ಮುಂಜಾನೆಯಿಂದಲೇ ಕೃಷ್ಣಮಠಕ್ಕೆ ಭಕ್ತರು ಭೇಟಿಕೊಟ್ಟು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಕೆ ಮಾಡುತ್ತಿದ್ದಾರೆ. ಕೃಷ್ಣಮಠವನ್ನು ಹೂವಿನಿಂದ ಅಲಂಕಾರ ಮಾಡಲಾಗಿದೆ. ಕೃಷ್ಣಮಠದಲ್ಲಿ ಜಪ ತಪ, ಭಜನೆ ನಡೆಯುತ್ತಿದೆ. ಇಂದು ದಿನಪೂರ್ತಿ ಉಪವಾಸವಿರುವ ಕೃಷ್ಣಭಕ್ತರು, ರಾತ್ರಿ ಕೃಷ್ಣನಿಗೆ ಅಘ್ರ್ಯ ಸಲ್ಲಿಕೆ ಮಾಡುತ್ತಾರೆ. ಈ ಮೂಲಕ ಶ್ರೀಕೃಷ್ಣನ ಜನ್ಮವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಉಡುಪಿಯಲ್ಲಿ ಆ. 24ರಂದು ವಿಟ್ಲಪಿಂಡಿ ಉತ್ಸವದ ಜೊತೆಗೆ ಕೃಷ್ಣ ಲೀಲೋತ್ಸವ ಕಾರ್ಯಕ್ರಮ ನಡೆಯುತ್ತದೆ. ಬೆಳಗ್ಗೆಯಿಂದಲೇ ಅನ್ನದಾಸೋಹ ನಡೆಯುತ್ತದೆ. ಮಠಕ್ಕೆ ಬರುವ ಭಕ್ತರಿಗೆ ವಿತರಿಸಲು ಲಕ್ಷ ಲಕ್ಷ ಲಡ್ಡು, ಚಕ್ಕುಲಿ ಪಾಕಶಾಲೆಯಲ್ಲಿ ಸಿದ್ಧಗೊಂಡಿದೆ. 35ಕ್ಕೂ ಅಧಿಕ ಹುಲಿ ವೇಷ ತಂಡಗಳು ಶ್ರೀಕೃಷ್ಣ ಲೀಲೋತ್ಸವದಲ್ಲಿ ಪಾಲ್ಗೊಂಡು ಮೆರುಗು ನೀಡಲಿವೆ. ಅಂದು ಮೊಸರು ಕುಡಿಕೆ ಉತ್ಸವವೂ ನಡೆಯಲಿದೆ.