ಮಂಗಳೂರು, ಆ 22 (Daijiworld News/MSP): ಕರ್ನಾಟಕದ ಕರಾವಳಿಗರಿಗೆ ಮತ್ತೆ ಮಳೆ ಕಂಟಕವಾಗುತ್ತಾ ಎನ್ನುವ ಅನುಮಾನ ಕಾಡತೊಡಗಿದೆ. ಈಗಾಗಲೇ ಪ್ರವಾಹ, ಭೂಕುಸಿತದಿಂದ ಕರ್ನಾಟಕದ ಕರಾವಳಿ ಭಾಗದ ಜನ ಕಂಗೆಟ್ಟಿದ್ದು, ಇದೀಗ ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ 24ರವರೆಗೆ ಭಾರಿ ಮಳೆಯಾಗುವ ನಿರೀಕ್ಷೆ ಇದೆ.
ಭಾರೀ ಮಳೆಯ ಹಿನ್ನಲೆಯಲ್ಲಿ ಕರಾವಳಿ ಕರ್ನಾಟಕದಲ್ಲಿ ಮತ್ತೆ ಅಲರ್ಟ್ ಘೋಷಿಸಲಾಗಿದ್ದು, ಕರಾವಳಿಯಲ್ಲಿ ಕನಿಷ್ಠ 204.5 ಮಿ.ಮೀ. ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕದ ಉಡುಪಿ, ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಆಂತರಿಕ ಕರ್ನಾಟಕದ ಘಟ್ಟ ಪ್ರದೇಶಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತೆ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ.