ಮಂಗಳೂರು, ಆ.22(Daijiworld News/SS): ಕರಾವಳಿ ಭಾಗದ ಅಲ್ಲಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಆ.21ರ ಸಂಜೆಯಿಂದ ಬಿರುಸಿನ ಮಳೆಯಾಗಿದೆ. ಕರಾವಳಿಯ ನಾನಾ ಕಡೆಯಲ್ಲಿ ಕಳೆದ ಎರಡು ದಿನಗಳಿಂದ ಕೊಂಚ ವಿರಾಮ ನೀಡಿದ್ದ ವರುಣ ಇದೀಗ ಮತ್ತೆ ಚುರುಕಾಗಿದ್ದಾನೆ.
ಆ.21ರಂದು ಮುಂಜಾನೆ ವೇಳೆ ಬಿರುಸಾಗಿದ್ದ ಮಳೆ ಬಳಿಕ ವಿರಾಮ ನೀಡಿತ್ತು. ಈ ಬಳಿಕ ಸಂಜೆ 4ರ ನಂತರ ಚುರುಕಾದ ಮಳೆಯಿಂದಾಗಿ ಸಂಜೆಯ ವಾಹನಗಳ ಸಂಚಾರಕ್ಕೂ ಕೊಂಚ ಅಡಚಣೆಯಾಗಿದೆ. ಕರಾವಳಿಯಲ್ಲಿ ರಾತ್ರಿಯಿಡೀ ಬಿರುಸಿನ ಮಳೆಯಾಗಿದೆ.
ಜಿಲ್ಲೆಯಲ್ಲಿ 23.4 ಮಿ.ಮೀ ಮಳೆಯಾಗಿದೆ. ಬಂಟ್ವಾಳದಲ್ಲಿ 18.1 ಮಿ.ಮೀ, ಬೆಳ್ತಂಗಡಿ 14.2 ಮಿ.ಮೀ, ಮಂಗಳೂರು 34.5 ಮಿ.ಮೀ, ಪುತ್ತೂರು 18.7 ಮಿ.ಮೀ ಹಾಗೂ ಸುಳ್ಯದಲ್ಲಿ 31.3 ಮಿ.ಮೀ ಮಳೆಯಾಗಿದೆ. ಘಟ್ಟ ಪ್ರದೇಶ ಹಾಗೂ ತಪ್ಪಲಿನ ಬೆಳ್ತಂಗಡಿ, ಸುಳ್ಯ ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ನೇತ್ರಾವತಿ, ಕುಮಾರಧಾರ, ಗುಂಡ್ಯ ನದಿಗಳಲ್ಲಿ ನೀರು ತುಂಬಿ ಹರಿಯುತ್ತಿದೆ.