ಉಡುಪಿ, ಆ 21 (DaijiworldNews/SM): ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಕಾರ್ಯ ನಿರ್ವಹಿಸುವುದಕ್ಕಿಂತ ಹೆಚ್ಚಾಗಿ ಕ್ಷೇತ್ರಗಳಿಗೆ ತೆರಳಿ, ಜನರ ಸಮಸ್ಯೆ ಆಲಿಸಿ, ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಿ ಎಂದು ಜಿಲ್ಲೆಗೆ ನೂತನವಾಗಿ ಆಗಮಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.
ಅವರು ಬುಧವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕಚೇರಿಯಲ್ಲಿ ಕಾರ್ಯ ನಿರ್ವಹಿಸುವುದಕ್ಕಿಂತ ಹೆಚ್ಚಾಗಿ ಕ್ಷೇತ್ರಗಳಿಗೆ ತೆರಳಿ ಸಮಸ್ಯೆಗಳನ್ನು ಅರಿಯಬೇಕು. ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಬೇಕು. ಹಾಗೂ ತಮ್ಮ ಅಧೀನ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿಯನ್ನು ಪರಿಶೀಲಿಸಬೇಕು ಎಂದರು.
ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಕಚೇರಿಗೆ ಸಮಯಕ್ಕೆ ಸರಿಯಾಗಿ ಆಗಮಿಸಿ, ತಮ್ಮ ಕೆಲಸ ಕಾರ್ಯಗಳನ್ನು ಮುಗಿಸುವಂತೆ ಹಾಗೂ ಕರ್ತವ್ಯದ ಅವಧಿಯಲ್ಲಿ ವೃಥಾ ಕಾಲ ಹರಣ ಮಾಡದೇ ನಿಗಧಿತ ಸಮಯದಲ್ಲಿ ಗುಣಮಟ್ಟದ ಕೆಲಸ ನಿರ್ವಹಿಸುವುದಕ್ಕೆ ಆದ್ಯತೆ ನೀಡಬೇಕು, ಎಲ್ಲಾ ಜಿಲ್ಲಾ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಾನು ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ಗೌರವಿಸಿ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು, ಅನಾವಶ್ಯಕವಾಗಿ ಅವರನ್ನು ವಿವಿಧ ಕಚೇರಿಗಳಿಗೆ ಅಲೆದಾಡಿಸಬೇಡಿ. ನಿಮ್ಮ ಕಚೇರಿಯಲ್ಲಿ ಸಾರ್ವಜನಿಕರು ಕೋರುವ ಸೇವೆ ಇಲ್ಲವಾದಲ್ಲಿ ಸಂಬಂದಪಟ್ಟ ಇಲಾಖೆಗೆ ತೆರಳಿ ಆ ಸೌಲಭ್ಯ ಪಡೆಯುವ ಬಗ್ಗೆ ಅವರಿಗೆ ಮಾಹಿತಿ ನೀಡಿ, ಸಾರ್ವಜನಿಕರಿಂದ ದೂರುಗಳು ಬಾರದಂತೆ ಕರ್ತವ್ಯ ನಿರ್ವಹಿಸಿ ಎಂದು ಜಗದೀಶ್ ಹೇಳಿದರು.