ಕುಂದಾಪುರ, ಆ 21 (DaijiworldNews/SM): ಬಂಟ ಸಮುದಾಯಕ್ಕೆ ಸರ್ಕಾರಗಳಿಂದ ನಿರಂತರವಾಗಿ ಅನ್ಯಾಯವಾಗುತ್ತಲೇ ಇದೆ. ಐವರು ಶಾಸಕರುಗಳು ಇದ್ದರೂ ಕೂಡಾ ಪ್ರಾತಿನಿಧ್ಯ ನೀಡುವ ಕೆಲಸವಾಗಿಲ್ಲ. ಈ ಬಾರಿಯೂ ನಮಗೆ ಪ್ರಾತಿನಿಧ್ಯ ನೀಡದ ಸರ್ಕಾರದ ನಡೆಯನ್ನು ಖಂಡಿಸುತ್ತೇವೆ ಎಂದು ಕುಂದಾಪುರ ಯುವ ಬಂಟರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಹೇರಿಕುದ್ರು ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕುಂದಾಪುರದಲ್ಲಿ 1984ರಿಂದ ಬಂಟ ಸಮುದಾಯದ ಶಾಸಕರು ಕ್ಷೇತ್ರವನ್ನು 9 ಅವಧಿಗಳಿಂದ ಪ್ರತಿನಿಧಿಸುತ್ತಿದ್ದರೂ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಕೆಲಸವಾಗಿಲ್ಲ. ಯಡಿಯೂರಪ್ಪನವರ ಸಚಿವ ಸಂಪುಟದ ಮುಂದಿನ ಪಟ್ಟಿಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಸಮ್ಮೀಶ್ರ ಸರ್ಕಾರ ಪ್ರತಾಪಚಂದ್ರ ಶೆಟ್ಟಿಯವರಿಗೆ ಸಚಿವ ಸ್ಥಾನ ನೀಡದಿದ್ದ ಸಂದರ್ಭದಲ್ಲಿಯೂ ಯುವ ಬಂಟರ ಸಂಘ ಆಕ್ರೋಶ ವ್ಯಕ್ತ ಪಡಿಸಿತ್ತು. ಬೆಂಗಳೂರಿನಲ್ಲಿ ಪ್ರತಿಭಟನೆಗಳನ್ನು ನಡೆಸಲಾಗಿತ್ತು. ಈಗ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಸಚಿವ ಸ್ಥಾನ ನೀಡದ ಬಗ್ಗೆ ಈಗಾಗಲೆ ಬಂಟ ಸಂಘಟನೆಗಳು ಸಭೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿವೆ. ನಮ್ಮ ಅಹವಾಲನ್ನು ಮುಖ್ಯಮಂತ್ರಿಗಳಿಗೆ ತಲುಪಿಸಲಿದ್ದೇವೆ ಎಂದರು.