ಮೂಡುಬಿದಿರೆ,ಆ 21(Daijiworld News/RD): ಐಎನ್ಎಕ್ಸ್ ಮೀಡಿಯಾ ವಂಚನೆ ಪ್ರಕರಣದಲ್ಲಿ ಭಾಗಿಯಾದ ಪಿ. ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಲು ಮನೆಗೆ ತೆರಳಿದಾಗ ಪಿ.ಚಿದಂಬರಂ ನಾಪತ್ತೆಯಾಗಿದ್ದು ಈ ಬಗ್ಗೆ ಮೂಡುಬಿದಿರಿ ಶಾಸಕ ಉಮನಾಥ್ ಕೋಟ್ಯಾನ್ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
"ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು ವಿಜಯ್ ಮಲ್ಯ, ಚೋಕ್ಸಿ ಅವರ ಸಾಲಿಗೆ ಸೇರಿಕೊಳ್ಳುತ್ತಾರಾ? ಅವರಿಗೆ ಲುಕ್ ಔಟ್ ನೋಟಿಸ್ ನೀಡಿರುವುದು ನಾಚಿಕೆಗೇಡಿನ ಸಂಗತಿ" ಎಂದು ಮೂಡುಬಿದಿರಿ ಶಾಸಕ ಉಮನಾಥ್ ಕೋಟ್ಯಾನ್ ಟ್ವೀಟ್ ಮಾಡಿದ್ದಾರೆ."
"ಚಿದಂಬರಂ ಅಂದು ವಿಜಯ್ ಮಲ್ಯ ಹೇಗೆ ಓಡಿದರು?ನೀರವ್ ಮೋದಿ ಹೇಗೆ ಓಡಿದರು? ಮೆಹುಲ್ ಚೋಕ್ಸಿ ಹೇಗೆ ಓಡಿದರು? ಎಂದು ಯಾವಾಗಲೂ ಕೇಳುತ್ತಿದ್ದರು. ನಾವು ಅಂದುಕೊಂಡಿದ್ದೆವು ಅವರು ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆಂದು, ಆದರೆ ಈಗ ಹೊತ್ತಾಯ್ತು, ಅವರು ಕೇಳುತ್ತಿರುವುದು ಪ್ರಶ್ನೆಯಲ್ಲ ಬದಲಾಗಿ ತಪ್ಪಿಸಿಕೊಳ್ಳುವ ಮಾರ್ಗ ಅಂತ," ಎಂಬ ಟ್ವೀಟ್ ಗೆ ರಘುಪತಿ ಭಟ್ ರೀ ಟ್ವೀಟ್ ಮಾಡಿದ್ದಾರೆ.
ಐಎನ್ಎಕ್ಸ್ ಮೀಡಿಯಾ ವಂಚನೆ ಪ್ರಕರಣದಲ್ಲಿ ಪಿ. ಚಿದಂಬರಂ ವಿಚಾರಣೆಗೆ ಹಾಜರಾಗಬೇಕು ಎಂದು ಜಾರಿ ನಿರ್ದೇಶನಾಲಯ ಈ ಹಿಂದೆ ಎರಡು ಬಾರಿ ನೊಟೀಸ್ ಜಾರಿ ಮಾಡಿತ್ತು. ಆದರೆ, ಪಿ. ಚಿದಂಬರಂ ವಿಚಾರಣೆಗೆ ಹಾಜರಾಗಿರಲಿಲ್ಲ. ಅಲ್ಲದೆ ಈ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದ್ದು, ಇದರ ಬೆನ್ನಿಗೆ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಅಧಿಕಾರಿಗಳು ಚಿದಂಬರಂ ಅವರನ್ನು ಬಂಧಿಸಲು ಅವರ ಮನೆಗೆ ತೆರಳಿದ್ದರು. ಆದರೆ, ಚಿದಂಬರಂ ಮನೆಯಲ್ಲಿ ಇಲ್ಲದ ಕಾರಣ ಅಧಿಕಾರಿಗಳು ಮನೆಯ ಗೋಡೆಗೆ ನೊಟೀಸ್ ಒಂದನ್ನು ಅಂಟಿಸಿದ್ದರು. ಈ ನೋಟೀಸ್ ನಲ್ಲಿ ಎರಡು ಗಂಟೆಯಲ್ಲಿ ಚಿದಂಬರಂ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಬಂಧನದಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳ ಕಣ್ತಪ್ಪಿಸಿ ಪಿ. ಚಿದಂಬರಂ ಓಡಾಡುತ್ತಿದ್ದು, ಅವರ ವಿರುದ್ಧ ಇಡಿ ಅಧಿಕಾರಿಗಳು 'ಲುಕ್ಔಟ್' ನೊಟೀಸ್ ಜಾರಿ ಮಾಡಿದ್ದಾರೆ.