ಕಾಸರಗೋಡು,ಆ.21(Daijiworld News/RD): ಉಪ್ಪಳದಲ್ಲಿ 2020ರೊಳಗೆ ಪೊಲೀಸ್ ಠಾಣೆ ಅಸ್ತಿತ್ವಕ್ಕೆ ಬರಲಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇರಳ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹ್ರಾ ಹೇಳಿದರು.
ಅವರು ಕಾಸರಗೋಡು ಅತಿಥಿ ಗ್ರಹದಲ್ಲಿ ನಡೆದ ಅದಾಲತ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸ್ಥಳದ ಕೊರತೆಯಿಂದ ೪೦ ರಷ್ಟು ಪೊಲೀಸ್ ಠಾಣೆ ಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಸ್ಥಳ ಲಭಿಸಿದ್ದಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಗಡಿ ಪ್ರದೇಶವಾಗಿರುವ ಕಾಸರಗೋಡು ಜಿಲ್ಲೆಯಲ್ಲಿ ಕ್ರಿಮಿನಲ್ ಗಳು ಹೊರ ರಾಜ್ಯಗಳಿಗೆ ಪರಾರಿಯಾಗಿ ತಪ್ಪಿಸಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಮೂರು ರಾಜ್ಯಗಳಿಗೆ ಸಂಯೋಜಿಸುವ ಯೋಜನೆ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.
ಕಾಸರಗೋಡು ಜಿಲ್ಲೆ ಸೇರಿದಂತೆ ಕೇರಳದಲ್ಲಿ ಅಪರಾಧ ನಡೆಸಿ ನೆರೆಯ ಕರ್ನಾಟಕ, ತಮಿಳುನಾಡುಗಳಲ್ಲಿ ತಲೆ ಮರೆಸಿಕೊಳ್ಳುತ್ತಿದ್ದು, ಇದರಿಂದ ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದ ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಸಂಯೋಜಿಸುವ ಯೋಜನೆ ಶೀಘ್ರ ಜಾರಿಗೆ ಬರಲಿದೆ ಎಂದು ಅವರು ಹೇಳಿದರು. ಕಾಸರಗೋಡು ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಬೇಕು. ಜಿಲ್ಲೆಯಲ್ಲಿ ಈಗ ಎರಡು ಉಪ ವಲಯ ಇದ್ದು, ಮೂರಕ್ಕೆ ಹೆಚ್ಚಿಸಲಾಗುವುದು. ಈ ಕುರಿತ ಬೇಡಿಕೆಯನ್ನು ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ಬೆಹ್ರಾ ಹೇಳಿದರು.
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಲೋಕನಾಥ್ ಬೆಹ್ರಾ ರವರು ಕಾಸರಗೋಡಿನಲ್ಲಿ ನಡೆಸಿದ ಅದಾಲತ್ ನಲ್ಲಿ 81 ರಷ್ಟು ದೂರುಗಳು ಲಭಿಸಿದ್ದು, 64 ದೂರುಗಳ ಪರಿಶೀಲನೆ ನಡೆಸಲಾಯಿತು. ಮದ್ರಸ ಅಧ್ಯಾಪಕ ರಿಯಾಜ್ ಮೌಲವಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೂರ್ಲು ಪರಿಸರ ಸೂಕ್ಷ್ಮ ಪ್ರದೇಶವಾಗಿ ರುವುದರಿಂದ ಈ ಸ್ಥಳದಲ್ಲಿ ಪೊಲೀಸರು ಅಗತ್ಯ ಭದ್ರತೆಯನ್ನು ಕಲ್ಪಿಸಬೇಕು . ಇಲ್ಲದಿದ್ದಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಲು ಕಾರಣವಾಗಲಿದೆ ಎಂದು ಸೂರ್ಲು ಓಲ್ಡ್ ಜುಮಾ ಮಸ್ಜಿದ್ ಸಮಿತಿ ಪದಾಧಿಕಾರಿಗಳು ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದರು. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಎಎಸ್ಪಿ ಮತ್ತು ಸರ್ಕಲ್ ಇನ್ಸ್ ಪೆಕ್ಟರ್ ರವರಿಗೆ ಹೊಣೆ ನೀಡಲಾಗಿದೆ ಎಂದು ಡಿಜಿಪಿ ಭರವಸೆ ನೀಡಿದರು.
ಹಳೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಬದಿಯಡ್ಕ ಪೊಲೀಸ್ ಠಾಣೆಗೆ ಹೊಸ ಕಟ್ಟಡ ನಿರ್ಮಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಂ . ಎಚ್ ಜನಾರ್ಧನ ರವರು ಮನವಿ ಸಲ್ಲಿಸಿದರು. ಪೈವಳಿಕೆ ಅಟ್ಟೆಗೋಳಿಯಲ್ಲಿ ಪಂಚಾಯತ್ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಸ್ವಾದೀನ ಪಡಿಸಿದ ಬಗ್ಗೆ ದೂರು ನೀಡಿದರು ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ ಎಂದು ಸುಲೈಖಾ ಮತ್ತು ಪುತ್ರ ಪಿ.ಜಿ.ಮುಸ್ತಫಾ ದೂರು ಸಲ್ಲಿಸಿದರು. ಸ್ಥಳದಲ್ಲಿ ಅಳವಡಿಸಲಾದ ಬೇಲಿ ತೆರವುಗೊಳಿಸುವ ಕ್ರಮಕೈಗೊಳ್ಳುವಂತೆ ಡಿ.ಜಿ.ಪಿ. ಅವರು ಜಿಲ್ಲಾಧಿಕಾರಿಗೆ ಆದೇಶ ನೀಡಿದರು. ವಿದ್ಯಾರ್ಥಿ ಪೊಲೀಸ್ ಕೆಡೆಟ್ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ ಅನುದಾನಿತ ಶಾಲೆಗಳಿಗೆ ಈ ಸಂಬಂಧ ನಿಧಿ ಮಂಜೂರು ಮಾಡುತ್ತಿಲ್ಲ ಎಂಬ ಆರೋಪದಲ್ಲಿ ಪೆರಡಾಲ ನವಜೀವನ ಪ್ರೌಢಶಾಲೆಯ ಪದಾಧಿಕಾರಿಗಳು ದೂರು ಸಲ್ಲಿಸಿದರು.