ಉಡುಪಿ, ಆ 21(Daijiworld News/RD): ವಾರಾಹಿ ನದಿಯಿಂದ ಉಡುಪಿ ನಗರಕ್ಕೆ ನೀರು ಸರಬರಾಜು ಮಾಡುವ ಯೋಜನೆ ಸಂಬಂಧ ಹಾಲಾಡಿಯಲ್ಲಿ ಜಾಗ ಖರೀದಿಸುವ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಶುದ್ದೀಕರಣ ಘಟಕ ನಿರ್ಮಿಸುವ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಕಾರ್ಯ ನಿರ್ವಾಹಕ ಅಭಿಯಂತರ ರಾಮಕೃಷ್ಣಯ್ಯ ತಿಳಿಸಿದ್ದಾರೆ.
ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು ಕ್ವಿಮಿಪ್ ಟ್ರಾಂಚ್- 2 ಅಡಿಯಲ್ಲಿ ಉಡುಪಿ ನಗರದಲ್ಲಿ ಕೈಗೊಳ್ಳುವ 24x7 ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಕಾಮಗಾರಿಗಳ ಬಗ್ಗೆ ಮಂಗಳವಾರ ಅಗಸ್ಟ್ 20 ರಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮಿನಿ ಹಾಲ್ನಲ್ಲಿ ಕರೆಯ ಲಾದ ಬೈಲೂರು ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಒಟ್ಟು 339 ಕೋಟಿ ರೂ. ವೆಚ್ಚದ ಈ ಯೋಜನೆಯ ಶುದ್ಧೀಕರಣ ಘಟಕ ವನ್ನು ಬಜೆಯ ಬದಲು ಹಾಲಾಡಿಯಲ್ಲಿಯೇ ನಿರ್ಮಿಸುವ ನಿರ್ಧಾರವನ್ನು ಈಗಾಗಲೇ ಮಾಡಲಾಗಿದ್ದು, ಅದಕ್ಕಾಗಿ ಹಾಲಾಡಿಯಲ್ಲಿ ಮೂರು ಜಾಗ ಗಳನ್ನು ಗುರುತಿಸಲಾಗಿದೆ. ಅದರಲ್ಲಿ ಅತಿ ಕಡಿಮೆ ಮೌಲ್ಯದ ಜಾಗವನ್ನು ಈ ವಾರದಲ್ಲಿ ಖರೀದಿಸುವ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸ ಲಾಗಿದೆ ಎಂದರು.
67 ಲಕ್ಷ ರೂ. ವೆಚ್ಚದಲ್ಲಿ ಶುದ್ಧೀಕರಣ ಘಟಕವನ್ನು ಸ್ಥಾಪಿಸಿ ಅಲ್ಲಿಂದ ಪಂಪ್ ಮಾಡಲಾದ 41 ಎಂಎಲ್ಡಿ ನೀರನ್ನು ನಗರಕ್ಕೆ ಪೂರೈಕೆ ಮಾಡಲಾಗುವುದು. ಹಾಲಾಡಿಯಿಂದ ಉಡುಪಿವರೆಗಿನ ಪೈಪ್ಲೈನ್ ದಾರಿಯುದ್ದಕ್ಕೂ ಸಿಗುವ ಗ್ರಾಮಗಳಿಗೆ ಅವರ ಬೇಡಿಕೆಗೆ ಅನುಗುಣವಾಗಿ ನೀರು ಒದಗಿಸಲಾಗುವುದು. ಅದಕ್ಕೆ ಮೀಟರ್ ಅಳವಡಿಸಿ ದರ ನಿಗದಿ ಪಡಿಸಿ ನಗರಸಭೆಗೆ ವಸೂಲಿ ಮಾಡ ಲಾಗುತ್ತದೆ ಎಂದು ಅವರು ಹೇಳಿದರು. ಈ ಯೋಜನೆ ಸಂಬಂಧ ಉಡುಪಿ ನಗರಸಭೆಯ ಒಟ್ಟು 35 ವಾರ್ಡ್ ಗಳನ್ನು ಎತ್ತರ ಹಾಗೂ ತಗ್ಗು ಪ್ರದೇಶ ಎಂದು 17 ವಿಭಾಗಗಳನ್ನಾಗಿ ವಿಂಗಡಿಸ ಲಾಗಿದೆ. ಇಲ್ಲಿ ಈಗಾಗಲೇ 10 ಓವರ್ ಟ್ಯಾಂಕ್ಗಳಿದ್ದು, ಬೈಲೂರು ವಾರ್ಡ್ ಸೇರಿದಂತೆ ಏಳು ಕಡೆಗಳಲ್ಲಿ ಇನ್ನು ಹೊಸ ಟ್ಯಾಂಕ್ ನಿರ್ಮಿಸಲಾಗುತ್ತದೆ. ಈ ಯೋಜನೆಯ ವಿಸ್ತರಣಾ ಜಾಲವು 371 ಕಿ.ಮೀ. ಉದ್ದ ಹೊಂದಿದೆ ಎಂದರು.
2046ರಲ್ಲಿ ವೃದ್ಧಿಯಾಗಲಿರುವ ಉಡುಪಿ ನಗರದ 1.95ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ಈ ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆ ಸಂಬಂಧಿಸಿ ಈಗಾಗಲೇ ಪ್ರತಿ ಮನೆಮನೆಗಳಿಗೆ ತೆರಳಿ ಸರ್ವೆ ನಡೆಸಲಾಗಿದ್ದು, ಕಾಮ ಗಾರಿಯ ಗುತ್ತಿಗೆ ವಹಿಸಿಕೊಳ್ಳುವವರು ಕಾಮಗಾರಿ ಪೂರ್ಣಗೊಂಡ ಆರು ತಿಂಗಳವರೆಗೆ ಅದರ ನಿರ್ವಹಣೆ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಟೆಂಡರ್ನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಉಡುಪಿ ನಗರಸಭೆ ಬೈಲೂರು ವಾರ್ಡ್ ಸದಸ್ಯ ರಮೇಶ್ ಕಾಂಚನ್ ಮಾತನಾಡಿ, ಬೈಲೂರು ವಾರ್ಡಿಗೆ ಸದ್ಯ ಅಜ್ಜರಕಾಡು ಹಾಗೂ ಇಂದಿರಾ ನಗರದಲ್ಲಿರುವ ಟ್ಯಾಂಕ್ಗಳಿಂದ ನೀರು ಸರಬರಾಜು ಆಗುತ್ತಿದೆ. ಇದರಿಂದ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಆದುದರಿಂದ ಮುಂದೆ ಬೈಲೂರಿನಲ್ಲಿಯೇ ನಿರ್ಮಾಣಗೊಳ್ಳುವ ಟ್ಯಾಂಕಿನಿಂದ ಇಡೀ ವಾರ್ಡ್ಗೆ ನೀರು ಪೂರೈಕೆ ಮಾಡ ಬೇಕು ಎಂದು ಮನವಿ ಮಾಡಿದರು.
ಇದು ಪ್ರಮೋದ್ ಮಧ್ವರಾಜ್ ಅವರ ಕನಸಿನ ಪ್ರಾಜೆಕ್ಟ್. 6 ಲಕ್ಷ ಲೀಟರ್ ನೀರು ಹೊಂದಿರುವ ಟ್ಯಾಂಕರ್ ಈಗಾಗಲೇ ಇದೆ. ಇನ್ನು ವಾರಾಹಿ ನೀರು ಉಡುಪಿಗೆ ಸಿಕ್ಕರೆ ಶಾಶ್ವತ ಪರಿಹಾರ ಸಿಕ್ಕಂತೆ. ಉಡುಪಿಯ ಜನತೆ ಅದನ್ನು ಸದುಪಯೋಗ ಪಡೆಸಿಕೊಳ್ಳಬೇಕು, ಎಂದರು. ಹೆಚ್ಚುವರಿ ನೀರು ಬಳಸಿದರೆ ಕ್ರಮಕ್ಕೆ ಸಲಹೆ ರಾಮಕೃಷ್ಣಯ್ಯ ನೀಡಿದರು. ಶುದ್ದೀಕರಣಗೊಳಿಸಿದ ನೀರನ್ನು ತೋಟಕ್ಕೆ ಬಳಸುವ ಮೂಲಕ ನೀರನ್ನು ಅಪವ್ಯಯ ಮಾಡುವುದನ್ನು ತಡೆಯಲು ಉಡುಪಿ ನಗರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಮಕೃಷ್ಣಯ್ಯ ಮನವಿ ಮಾಡಿದರು. 100ಲೀಟರ್ ನೀರನ್ನು ಶುದ್ದೀಕರಣಗೊಳಿಸಲು ಕನಿಷ್ಠ 14ರೂ. ವ್ಯಯಿಸ ಲಾಗುತ್ತದೆ. ಈ ನೀರನ್ನು ಕೇವಲ ಕುಡಿಯಲು, ಅಡುಗೆ, ಸ್ನಾನಕ್ಕೆ ಮಾತ್ರ ಬಳಸ ಬೇಕು. ತೋಟ, ಗಾರ್ಡನ್, ವಾಹನ ತೊಳೆಯಲು ಬಳಸುವುದರಿಂದ ನೀರಿನ ಅಪವ್ಯಯವಾಗುತ್ತದೆ. ಆದುದರಿಂದ ನಗರಸಭೆಯವರು ಒಂದು ಕುಟುಂಬಕ್ಕೆ ಎಷ್ಟು ನೀರಿನ ಅಗತ್ಯ ಇದೆ ಎಂಬುದರ ಬಗ್ಗೆ ಸರ್ವೆ ನಡೆಸಿ, ಅದಕ್ಕಿಂತ ಹೆಚ್ಚು ನೀರು ಬಳಸುವವರಿಗೆ ಎರಡು ಪಟ್ಟು ಬಿಲ್ ಹಾಕಬೇಕು. ಈ ಬಗ್ಗೆ ನಗರಸಭೆ ಆಡಳಿತ ನಿರ್ಣಯಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಸಭೆಯಲ್ಲಿ ಉಡುಪಿ ನಗರಸಭೆ ಜೂನಿಯರ್ ಇಂಜಿನಿಯರ್ ಗಳಾದ ಅಶ್ವಿನಿ ಪ್ರಶಾಂತ್, ರಾಜಶೇಖರ್, ಸ್ಥಳೀಯ ಪ್ರಮುಖರಾದ ಇಂದು ರಮಾನಂದ ಭಟ್ ಉಪಸ್ಥಿತರಿದ್ದರು.