ಬಂಟ್ವಾಳ, ಆ 20 (DaijiworldNews/SM): ಬಾಲ್ಯ ವಿವಾಹ ನಡೆಸಲು ಸಿದ್ಧತೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಮಧ್ಯಪ್ರವೇಶಿಸಿ ಮದುವೆಗೆ ತಡೆಯೊಡ್ಡಿದ ಘಟನೆ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಅಗಸ್ಟ್ 19 ರಂದು ಸೋಮವಾರ ನಾವೂರದ ಬಾಲಕಿ ಜೊತೆ ಮೂಡಬಿದಿರೆಯ ಯುವಕನ ಮದುವೆಯ ಬಗ್ಗೆ ಪೂರ್ವತಯಾರಿ ನಡೆದಿತ್ತು. ನಾವೂರ ಗ್ರಾಮದ ಪರ್ಲ ಶಾಲಾ ಬಳಿಯ ಮನೆಯೊಂದರಲ್ಲಿ ಅಗಸ್ಟ್ 17 ರಂದು ಶನಿವಾರ ನಾವೂರದ ಬಾಲಕಿಗೆ ನಿಶ್ಚಿತಾರ್ಥ ನಡೆಯುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧಿಕಾರಿ ಗಾಯತ್ರಿ ಕಂಬಳಿ, ಮಕ್ಕಳ ರಕ್ಷಣಾಧಿಕಾರಿ ಕುಮಾರ್, ಸ್ಥಳೀಯ ಗ್ರಾ.ಪಂ. ಪಿ.ಡಿ.ಒ. ರಚನ್ ಕುಮಾರ್, ಗ್ರಾಮಕರಣೀಕ ಕುಮಾರ್ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರು ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ನಿಶ್ಚಿತಾರ್ಥ ನಡೆಯುತ್ತಿತ್ತು.
ಬಾಲಕಿಗೆ ಜನವರಿ 2020 ಕ್ಕೆ 18 ವರ್ಷ ತುಂಬಲಿದೆ. ಹಾಗಾಗಿ ಅಪ್ರಾಪ್ತ ಬಾಲಕಿಗೆ ಮದುವೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಬಗ್ಗೆ ಮನೆಯವರಿಗೆ ವಿಷಯ ತಿಳಿಸುತ್ತಿದ್ದಂತೆ ಸಕಾರಾತ್ಮಕ ವಾಗಿ ಸ್ಪಂದಿಸಿ ದ್ದಾರೆ.
ಬಳಿಕ ಬಾಲಕಿಗೆ 18 ವರ್ಷ ತುಂಬುವವರೆಗೆ ಮದುವೆ ಮಾಡದಂತೆ ಮುಚ್ಚಳಿಕೆ ಮಾಡಿಕೊಂಡ ಬಗ್ಗೆ ಪಿ.ಡಿ.ಒ. ರಚನ್ ಕುಮಾರ್ ತಿಳಿಸಿದ್ದಾರೆ.