ಕುಂದಾಪುರ, ಆ 20 (Daijiworld News/MSP): ಧಾರ್ಮಿಕ ಸೇವೆ ಎಂದು ಪರಿಭಾವಿಸಿ ಗಣೇಶನ ನಿರ್ಮಿಸಿ ಕೊಡುವ ಈ ನಿರ್ಮಾತೃಗಳ ಪೈಕಿ ಕುಂದಾಪುರದಲ್ಲಿ ಅತೀ ಹೆಚ್ಚು ಗಣಪತಿ ವಿಗ್ರಹಗಳನ್ನು ನಿರ್ಮಿಸುವವರಲ್ಲಿ ರಾಜೇಶ ಗುಡಿಗಾರ್ ಬಳ್ಕೂರು ಎತ್ತಿದ ಕೈ.
ಇವರು ಬಸ್ರೂರಿನ ಶಿಶು ಮಂದಿರದ ಹತ್ತಿರ ಇವರು ಗಣೇಶ ವಿಗ್ರಹಗಳ ರಚನೆ ಮಾಡುತ್ತಾರೆ. ಪ್ರತೀ ವರ್ಷ 150ಕ್ಕೂ ಹೆಚ್ಚು ವಿಗ್ರಹಗಳ ರಚನೆ ಮಾಡುತ್ತಾರೆ. ಈ ವರ್ಷ 155 ಗಣೇಶ ವಿಗ್ರಹಗಳಿಗೆ ಬೇಡಿಕೆ ಪಡೆದುಕೊಂಡು ಸಿದ್ಧತಾ ಕಾರ್ಯ ಪೂರ್ಣಗೊಳಿಸಿದ್ದಾರೆ. ಪ್ರತೀ ವರ್ಷ ನೂರಕ್ಕೂ ಅಧಿಕ ವಿವಿಧ ಆಕಾರ, ಸ್ವರೂಪಗಳ ಗಣಪತಿಯನ್ನು ರಚಿಸುವ ರಾಜೇಶ ಗುಡಿಗಾರ್ ಅದ್ಬುತ ಕಲಾವಿದ. ಆದರೆ ಇನ್ನೂ ಸುಪ್ತವಾಗಿಯೇ ಇದ್ದಾರೆ.
ತಾತನ ಕಾಲದಿಂದಲೂ ಈ ವೃತ್ತಿ ಅನೂಚಾನವಾಗಿ ಮುಂದುವರಿದುಕೊಂಡು ಬಂದಿದೆ. ಮೋಹನ ಗುಡಿಗಾರ್ ಅವರಿಂದ ಈ ವಿದ್ಯೆ ಸಿದ್ಧಿಸಿಕೊಂಡ ರಾಜೇಶ ಗುಡಿಗಾರ್ ಅವರ ಅಸೀಮ ಆಸಕ್ತಿ, ಈ ಕಲೆಯ ಬಗ್ಗೆ ಇರುವ ಆಸ್ಮಿಯತೆ ಇದರಲ್ಲಿ ಮುಂದುವರಿಯುವಂತೆ ಮಾಡಿದೆ. ರಾಜೇಶ ಗುಡಿಗಾರ್ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ 1993 ರಲ್ಲಿ ಬಿಕಾಂ ಪದವಿ ಪಡೆದಿದ್ದಾರೆ. ನಂತರ ಹೆಲ್ತ್ ಇನ್ಸಪೆಕ್ಟರ್ ಡಿಪ್ಲಮೋ ಮಾಡಿದ್ದಾರೆ. ಬದುಕಿನ ಮುಂದೆ ಸಾಕಷ್ಟು ಅವಕಾಶಗಳು ಇದ್ದರೂ ಕೂಡಾ ಅವರು ಆಯ್ದುಕೊಂಡಿದ್ದು ಮಾತ್ರ ಪರಂಪರೆ ಈ ವೃತ್ತಿ. ಮಳೆಗಾಲದಲ್ಲಿ ಗಣೇಶ ವಿಗ್ರಹ ರಚನೆ, ಬೇರೆ ಸಮಯದಲ್ಲಿ ದೈವದ ವಿಗ್ರಹಗಳ ರಚನೆ, ಬಣ್ಣಗಾರಿಕೆ. ದಾರುಶಿಲ್ಪ ಹಾಗೂ ಮೃತ್ತಿಕೆಯಲ್ಲಿ ಅವರು ಅಪೂರ್ವ ಸಿದ್ಧಿ ಪಡೆದಿದ್ದಾರೆ. ಇವರು ತಯಾರಿಸುವ ಗಣಪತಿ ವಿಗ್ರಹಗಳಷ್ಟೆ ದಾರು ಕೆತ್ತನೆಯ ದೈವದ ವಿಗ್ರಹಗಳು ಅಷ್ಟೇ ಪ್ರಸಿದ್ದಿ ಪಡೆದಿದೆ.
ರಾಜೇಶ ಗುಡಿಗಾರ್ ಅವರಲ್ಲಿ ಅಡಕವಾಗಿರುವ ಪ್ರತಿಭೆಯ ಪ್ರಬುದ್ದತೆಯ ಹಿನ್ನೆಲೆ ಅಧ್ಯಾಪನಾ ಮತ್ತು ಸೂಕ್ಷ್ಮ ಗ್ರಾಹಿತ್ವ. ಯಾವುದೇ ವಿಗೃಹ ತಯಾರಿಯ ಬಗ್ಗೆ ಅವರಲ್ಲಿ ಸ್ಪಷ್ಟತೆ ಇರುತ್ತದೆ. ಕಲೆಯ ಬಗೆಗಿನ ತುಡಿತ, ಮರವಿರಲಿ, ಮಣ್ಣು ಇರಲಿ ರಚನೆಯಲ್ಲಿ ಸಚೇತನತೆಗೆ ಅವರು ನೀಡುವ ಒತ್ತು ಗಮನ ಸಳೆಯುತ್ತದೆ. ಸಿದ್ಧ ಮಾದರಿಗಳ ಹೆಚ್ಚು ಬಳಕೆ ಮಾಡದೆ ಕುಂಚ ಕಲೆಗೆ ಆದ್ಯತೆ ನೀಡುತ್ತಾರೆ. ಹಾಗಾಗಿಯೇ ಉಡುಪಿ ಜಿಲ್ಲೆಯಲ್ಲಿ ರಾಜೇಶ ಗುಡಿಗಾರ್ ಹೆಚ್ಚು ಪ್ರಸಿದ್ದಿ ಪಡೆದುಕೊಂಡಿದ್ದಾರೆ.
ಕುಂದಾಪುರ ತಾಲೂಕಿನಲ್ಲಿ ಒಬ್ಬ ವ್ಯಕ್ತಿ 155 ಗಣಪತಿಯ ವಿಗ್ರಹ ರಚಿಸುವುದೆಂದರೆ ಸಣ್ಣ ವಿಚಾರವಲ್ಲ.ಇಷ್ಟೂ ಕೂಡಾ ಬೇಡಿಕೆ ಆಧಾರದಲ್ಲಿ ರಚಿಸುವುದೆ ಆಗಿದೆ. ಜೂನ್ ತಿಂಗಳಲ್ಲಿಯೇ ಬೇಡಿಕೆಗಳನ್ನು ಪಡೆದುಕೊಂಡು ಮಣ್ಣಿನೊಂದಿಗೆ ಕಸರತ್ತು ನಡೆಸಲು ಆರಂಭಿಸಿದರೆ ಮೂರು ತಿಂಗಳು ಮೂರು ತಿಂಗಳು ದಿನದ ಎಂಟು ಗಂಟೆಗೂ ಹೆಚ್ಚುಕಾಲ ಮಣ್ಣಿನೊಡನೆ ಸರಸ ವಾಡುತ್ತಲೆ ಇರಬೇಕು. ಗಣಪತಿ ವಿಗ್ರಹ ರಚನೆಗೆ ತಾಳ್ಮೆ ಬೇಕು. ಶೃದ್ದೆ ಬೇಕು. ಶೃದ್ದೆ, ತಾಳ್ಮೆ, ಭಕ್ತಿ ಎರಕಗೊಂಡರೆ ನಿರೀಕ್ಷೆಗೂ ಮೀರಿದ ಗಣಪತಿ ಪಡಿಮೂಡಿ ಬರುತ್ತಾನೆ. ಅದನ್ನು ರಾಜೇಶ ಗುಡಿಗಾರ ತಯಾರಿಸುವ ಗಣಪತಿಯಲ್ಲಿ ಕಾಣಬಹುದು.
ರಾಜೇಶ ಗುಡಿಗಾರ್ ಐದು ಅಡಿಯ ತನಕ ಗಣಪತಿ ತಯಾರಿಸುತ್ತಾರೆ. ಬಸ್ರೂರು ಹಾಗೂ ಕೋಟೇಶ್ವರದಲ್ಲಿ ತಯಾರಿಕಾ ಕೇಂದ್ರಗಳಿವೆ. ಗಣಪತಿಯ 90% ಕೆಲಸವನ್ನು ಇವರೇ ಸ್ವತಃ ಮಾಡುತ್ತಾರೆ. ಗ್ರಾಹಕರ ಬೇಡಿಕೆಯ ಪ್ರಕಾರ ಗಣಪತಿ ರಚಿಸುವ ಇವರು ಬೇರೆ ಬೇರೆ ಭಂಗಿಯ, ವಿನ್ಯಾಸದ, ಪುರಾಣದ ಮಹತ್ವಿಕೆ ಸಾರುವ ರೀತಿಯಲ್ಲಿ ಗಣಪತಿ ರಚಿಸುತ್ತಾರೆ. ಸರ್ಪದ ಮೇಲೆ, ಕಮಲದ ಮೇಲೆ, ಶಂಖದ ಮೇಲೆ, ಹಂಸದ ಮೇಲೆ, ಮೂಷಿಕದ ಮೇಲೆ ಕುಳಿತಿರುವ ಗಣಪತಿಯನ್ನು ತಯಾರಿಸುತ್ತಾರೆ.
ಈಗಿನ ಆರ್ಥಿಕ ಸ್ಥಿತಿ ವಿಗ್ರಹಕ್ಕೆ ರಚನೆಗೆ ತಗಲುವ ಸಮಯ, ಆವೆ ಮಣ್ಣಿನ ಬೆಲೆ ನೋಡಿದರೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ವಿಗ್ರಹಗಳ ಸಂಭಾವನೆ ಕಡಿಮೆ. ಕೆಲವರು ಚೌಕಾಶಿ ಮಾಡುವವರು ಇರುತ್ತಾರೆ. ವಿಗ್ರಹ ರಚನೆ ದೇವರ ಸೇವೆಯೆಂದು ನಾನು ಭಾವಿಸಿಕೊಂಡಿದ್ದೇನೆ ಎನ್ನುತ್ತಾರ ರಾಜೇಶ ಗುಡಿಗಾರ್.
ಬಣ್ಣದ ವಿಚಾರದಲ್ಲೂ ಅಷ್ಟೇ ಎಂದಿಗೂ ಸ್ವಾಭಾವಿಕ ಹಾಗೂ ಮಾಲಿನ್ಯ ರಹಿತವಾದ ಬಣ್ಣಗಳನ್ನೇ ಬಳಸುತ್ತಾರೆ. ನೀರಿಗೂ, ಜಲಚರಗಳಿಗೆ ಹಾನಿಯಾಗದ ಬಣ್ಣಗಳನ್ನು ಬಳಸಲಾಗುತ್ತದೆ. ಗ್ರಾಹಕರಿಗೂ ಅಷ್ಟೆ ನಿರ್ದಿಷ್ಟವಾದ ಧಾರಣೆಗೆ ಹಠ ಹಿಡಿಯದೆ ಸೇವೆಯ ರೀತಿಯಲ್ಲಿ ಗಣೇಶ ವಿಗ್ರಹವನ್ನು ನೀಡುತ್ತಾರೆ. ಪರಿಸರ ಸ್ನೇಹಿ ಬಣ್ಣಗಳ ಬಳಕೆ, ಪುರಾಣದಲ್ಲಿ ಚಿತ್ರಿತ ಗಣಪತಿಯನ್ನೇ ನಿರ್ಮಿಸುವುದು ಇವರ ವಿಶೇಷತೆ. ಸಾಂಪ್ರಾದಾಯಿಕ ಶೈಲಿಯಲ್ಲೇ ಮೂಡಿ ಬಂದಿರುವ ೧೫೦ಕ್ಕೂ ವಿವಿಧ ಆಕಾರಗಳ ಗಣಪತಿಯನ್ನು ಒರ್ವ ವ್ಯಕ್ತಿ ನಿರ್ಮಿಸುವುದೆಂದರೆ ಸುಲಭದ ವಿಚಾರವಲ್ಲ. ರಾಜೇಶ ಗುಡಿಗಾರರ ಪ್ರತಿಭಾವ್ಯಕ್ತಿಯ ಸೇವಾ ಕಾರ್ಯ ಗುರುತಿಸುವಂತಹದ್ದು. ಸರ್ಕಾರ, ಇಲಾಖೆಗಳು ಇಂಥಹ ಸಾಧಕರನ್ನು ಗುರುತಿಸುವ, ಗೌರವಿಸುವ ಕಾರ್ಯ ಮಾಡಿದರೆ ಕಲೆಗೆ ಬೆಲೆ ಸಿಕ್ಕಂತಾಗುತ್ತದೆ. ಮಾಹಿತಿ ಇವರ ದೂರವಾಣಿ ಸಂಖ್ಯೆ-7760007701