ಸುಳ್ಯ,ಆ 20 (Daijiworld News/RD): ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ನೂತನ ಸಚಿವರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, 17 ನೂತನ ಸಚಿವರ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಚಿವರಿಗೆ ಯಾವುದೇ ಸ್ಥಾನ ನೀಡದೆ ರಾಜ್ಯ ಸರ್ಕಾರ ದಕ್ಷಿಣ ಕನ್ನಡವನ್ನು ನಿರ್ಲ್ಯಕ್ಷಿಸಿದ್ದು, ಈ ಬಗ್ಗೆ ಆರು ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ, ಸಚಿವಾಕಾಂಕ್ಷಿ ಎಸ್ ಅಂಗಾರ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸಭೆ ಸೇರಿದ ಸುಳ್ಯದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮಾತನಾಡಿದ ಎಸ್ ಅಂಗಾರ ಅವರು, ನನ್ನ ಹಣೆಬರಹದಲ್ಲಿ ಮಂತ್ರಿ ಆಗುವುದು ಬರೆದಿಲ್ಲವೇನೋ ಎಂದು ನಿರಾಶಾಯದಾಯಕ ಮಾತುಗಳನ್ನಾಡಿದರು. ಮಂತ್ರಿ ಪದವಿ ಸಿಗುತ್ತದೆಂದು ಬೆಂಗಳೂರಿಗೆ ಬಂದ ಕಾರ್ಯಕರ್ತರಲ್ಲಿ ಕ್ಷಮೆಯನ್ನು ಕೇಳುವ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರಿಂದ ಅಸಮಧಾನ ಮತ್ತು ಆಕ್ರೋಶದ ಮಾತುಗಳುವ್ಯಕ್ತವಾಗಿತ್ತು. ಕೊನೆ ಕ್ಷಣದ ಈ ನಿರ್ಧಾರದ ಕುರಿತು ಅಂಗಾರರು ಪ್ರಮಾಣ ವಚನ ಸಮಾರಂಭದಲ್ಲಿ ದೂರ ಉಳಿದಿದ್ದಾರೆ.
ಪ್ರಮಾಣ ವಚನದಲ್ಲಿ ಪ್ರಥಮ ಹಂತದ 17 ಸಚಿವರ ಪಟ್ಟಿಯನ್ನು ಬಿಡುಗಡೆಗೊಳಿಸಿದ ಮುಖ್ಯಮಂತ್ರಿ, ಕೊನೆ ಕ್ಷಣದವರಗೂ ಸಚಿವ ಮಂತ್ರಿ ದೊರಕಬಹುದು ಎಂದು ಬಯಸಿದ್ದ ಶಾಸಕರಿಗೆ ನಿರಾಸೆಯುಂಟಾಗಿದೆ. ಸುಳ್ಯ ಕ್ಷೇತ್ರದಲ್ಲಿ ಆರು ಬಾರಿ ಗೆದ್ದಿರುವ ಎಸ್ ಅಂಗಾರರಿಗೆ ಸಚಿವ ಸ್ಥಾನ ದೊರಕಬಹುದು ಎಂದು ಸಾಕಷ್ಟು ನಿರೀಕ್ಷೆಗಳು ಕಾರ್ಯಕರ್ತರಲ್ಲಿತ್ತು. ಆದರೆ ಇಂದು ಬಿಡುಗಡೆಗೊಳಿಸಿದ ಸಚಿವರ ಅಂತಿಮ ಪಟ್ಟಿ ಮೌನ ಮುರಿಯುವಂತೆ ಮಾಡಿದೆ.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಕ್ಷೇತ್ರವನ್ನು ಬಿಜೆಪಿ ತನ್ನದಾಗಿಸಿದ್ದು, ಹೀಗಾಗಿ ಮುಖ್ಯಮಂತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಿಗೆ ಮಂತ್ರಿಗಿರಿ ನೀಡಬಹುವುದೆಂಬ ಸಾಕಷ್ಟು ನಿರೀಕ್ಷೆಗಳಿದ್ದು, ಈ ನಿರೀಕ್ಷೆಗಳಿಗೆ ಮುಖ್ಯಮಂತ್ರಿ ತಣ್ಣೀರೆರಿಚಿದ್ದಾರೆ. ಈ ಬಗ್ಗೆ ಕರಾವಳಿಯಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿದ್ದು. ಕುಂದಾಪುರ ಕ್ಷೇತ್ರದಿಂದ 5 ಬಾರಿ ಗೆದ್ದಿರುವ ಶ್ರೀನಿವಾಸ ಶೆಟ್ಟಿಯವರಿಗೆ ಸ್ಥಾನ ದೊರಕುವ ಸಾಧ್ಯತೆಗಳಿವೆ ಎಂಬ ಕುತೂಹಲ ಮನೆ ಮಾಡಿತ್ತು. ಆದರೆ ಕರಾವಳಿಯಲ್ಲಿ ಯಾರಿಗೂ ಸಚಿವ ಸ್ಥಾನ ನೀಡದೇ ಇರುವುದು ಬಿಜೆಪಿ ಶಾಸಕರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಬೇಸರ ಉಂಟು ಮಾಡಿಸಿದೆ. ಇನ್ನು ಎರಡನೇ ಹಂತದ ಪಟ್ಟಿಯಲ್ಲಿ ಇನ್ನು ಬಿಡುಗಡೆಯಾಗಲಿದ್ದು, ಸಚಿವ ಸ್ಥಾನ ನೀಡಬಹುವುದೆಂಬ ನಿರೀಕ್ಷೆಯಲ್ಲಿದ್ದಾರೆ.