ಮಂಗಳೂರು, ಆ 20(Daijiworld News/MSP): "ನಾನು ಅಮಾಯಕನಾಗಿದ್ದು ನನಗೆ ಉಗ್ರ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಇದರಿಂದ ನಮ್ಮ ಇಡೀ ಕುಟುಂಬ ಮಾನಸಿಕವಾಗಿ ಕಿರುಕುಳಕ್ಕೆ ಒಳಗಾಗಿದ್ದು, ಇಂತಹ ಸ್ಥಿತಿ ಹಿಂದೂ ಇರಲಿ, ಮುಸ್ಲಿಂ ಇರಲಿ, ಯಾರಿಗೂ ಬರಬಾರದು" ಎಂದು ನೊಂದು ನುಡಿದರು ಬೆಳ್ತಂಗಡಿ ತಾಲೂಕಿನ ಗೋವಿಂದೂರುವಿನ ನಿವಾಸಿ ರವೂಫ್.
ಆ.20ರ ಮಂಗಳವಾರ ಸರ್ಕಿಟ್ ಹೌಸ್ ನಲ್ಲಿ ಶಾಸಕ ಯು.ಟಿ ಖಾದರ್ ಅವರು ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಗೋವಿಂದೂರುವಿನ ನಿವಾಸಿ ರವೂಫ್, " ಪಾಕಿಸ್ಥಾನಕ್ಕೆ ಸೆಟಲೈಟ್ ಕರೆ ಹೋದ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್ಐಎ)ವು ಬೆಳ್ತಂಗಡಿಯಿಂದ ಓರ್ವನನ್ನು ಬಂಧಿಸಿದ್ದಾರೆ" ಎಂದು ಕೆಲವು ಮಾಧ್ಯಮಗಳಲ್ಲಿ ನನ್ನ ಬಗ್ಗೆ ಅಪಪ್ರಚಾರ ನಡೆಸುತ್ತಿದೆ. ನಿಜಕ್ಕೂ ನನಗೆ ಎನು ನಡೆಯುತ್ತಿದೆ ಎಂದು ತಿಳಿಯುತ್ತಿಲ್ಲ. ನಾನು ವಿದೇಶಕ್ಕೂ ಕರೆ ಮಾಡಿಯೂ ಇಲ್ಲ. ಕರೆ ಬಂದಿರುವುದು ಇಲ್ಲ. ಸಂಪೂರ್ಣ ಸುಳ್ಳು ಸುದ್ದಿ. 23 ವರ್ಷದ ಹಿಂದೆ 12 ವರ್ಷದ ಬಾಲಕನಿದ್ದಾಗ ತಂದೆ ಮೃತಪಟ್ಟಾಗ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡು ನಾವು ಕಡು ಬಡತನದಿಂದ ಜೀವನ ಸಾಗಿಸುತ್ತಿದ್ದವರು. ಆದರೆ ನನ್ನ ಬಗ್ಗೆ ಈ ರೀತಿಯ ಅಪಪ್ರಚಾರದಿಂದ ಗ್ರಾಮದಲ್ಲಿ ತಲೆಯೆತ್ತಿ ನಡೆದಾಡಲು ಸಾಧ್ಯವಾಗುತ್ತಿಲ್ಲ. ಘಟನೆಯಿಂದ ಗ್ರಾಮದಲ್ಲಿ ನಮ್ಮ ಕುಟುಂಬವನ್ನು ನಾಕಾರಣ ಅನುಮಾನ ಪಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು ರವೂಫ್.
" ಈ ಅಪಪ್ರಚಾರದ ವಿರುದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ನನ್ನ ಬಂಧನವಾಗಿದೆ,ಸೆಟಲೈಟ್ ಕರೆ ಹೋಗಿದೆ ಹೀಗೆ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ ಮಾಧ್ಯಮದ ವಿರುದ್ಧ ಕ್ರಮ ಕೈಗೊಳ್ಳಲೂ ಒತ್ತಾಯ ಮಾಡಿದ್ದೇವೆ. ನ್ಯಾಯ ಸಿಗುವುದು ವಿಶ್ವಾಸವಿದೆ. ನನಗೆ ನಾನೊಬ್ಬ ಭಾರತೀಯ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ. ನನ್ನ ರಕ್ತದಲ್ಲಿಯೇ ದೇಶಪ್ರೇಮ ಭಾರತೀಯತೆ ಇದೆ. ನನ್ನ ಪರಿಸ್ಥಿತಿ ಇನ್ಯಾರಿಗೂ ಬರುವುದು ಬೇಡ" ಎಂದು ಅಳಲು ತೋಡಿಕೊಂಡರು.
ಈ ಸಂದರ್ಭ ಮಾತನಾಡಿದ ಶಾಸಕ ಯು.ಟಿ ಖಾದರ್, ಎಸ್ಪಿ, ಕಮಿಷನರ್ ಗೆ ತಿಳಿಯದ ಸುದ್ದಿಯ ಮೂಲ ಯಾರು? ರವೂಫ್ ಅವರ ಬಗ್ಗೆ ಹರಡಿರುವ ವದಂತಿ ಬಗ್ಗೆ ಸಮಗ್ರ ತನಿಖೆ ನಡೆದು ಸತ್ಯ ಹೊರಬರಬೇಕು. ಅವರ ವಿರುದ್ಧ ಇಂಥಹ ಯಾವುದೇ ಅರೋಪ ಇಲ್ಲ ಎಂದು ಎಸ್ಪಿ ಹೇಳಿದ್ದಾರೆ. ಹಾಗಾದರೆ ಅವರ ವಿರುದ್ಧ ಈ ರೀತಿ ಅಪಪ್ರಚಾರ ನಡೆಸಿದವರು ಯಾರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಆಗ್ರಹಿಸಿದ್ದಾರೆ.