ಕಾಸರಗೋಡು, ಆ 18 (DaijiworldNews/SM): ಜಿಲ್ಲೆಯ ಮಂಜೇಶ್ವರದ ಅವರ್ ಲೇಡಿ ಆಫ್ ಮೆರ್ಸಿ ಚರ್ಚ್ ಮೇಲೆ ಸೋಮವಾರ ನಡೆದ ದಾಳಿ ಪ್ರಕರಣ ಇದೀಗ ತೀವ್ರ ಪ್ರತಿಭಟನಾ ಸ್ವರೂಪ ಪಡೆದುಕೊಂಡಿದೆ.
ಪ್ರಕರಣದ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಕಲ್ಲೆಸೆತಕ್ಕೆ ಮರಳು ಮಾಫಿಯಾದ ಕಿಡಿಗೇಡಿಗಳ ಕೃತ್ಯ ಕಾರಣನೆನ್ನಲಾಗುತ್ತಿದೆ. ಆದರೆ ನಿಖರ ಕಾರಣ ಏನೆಂದು ಪೊಲೀಸರು ತಿಳಿಸಿಲ್ಲ.
ಆದಿತ್ಯವಾರ ಸಂಜೆ ಮರಳು ಮಾಫಿಯಾದ ತಂಡವು ಇಲ್ಲಿನ ಮನೆಯೊಂದಕ್ಕೆ ನುಗ್ಗಿ ದಾಂಧಲೆ ನಡೆಸಿ, ಮನೆಯವರ ಮೇಲೆ ಹಲ್ಲೆ ನಡೆಸಿತ್ತು, ಇದರ ಮುಂದುವರಿದ ಭಾಗವಾಗಿ ಚರ್ಚ್ ಮೇಲೆ ಕಲ್ಲೆಸೆಯಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಶಾಂತಿಯುತವಾಗಿರುವ ಮಂಜೇಶ್ವರ ಪರಿಸರದಲ್ಲಿ ಇಂತಹ ಅಹಿತಕರ ಘಟನೆಗಳನ್ನು ಸೃಷ್ಟಿಸಿ ಲಾಭ ಪಡೆಯುವ ಹುನ್ನಾರ ಇದರ ಹಿಂದಿದೆ ಎಂದು ಹೇಳಲಾಗುತ್ತಿದೆ.
ಮುಂಜಾನೆ 3.20ರ ಸುಮಾರಿಗೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಕಲ್ಲೆಸೆದು ಪರಾರಿಯಾಗಿರುವುದು ಇಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯ ಸುದ್ದಿ ಹೊರಬೀಳುತ್ತಿದ್ದಂತೆ ಜಾತಿ ಮತ ಬೇಧ ಇಲ್ಲದೆ ಸರ್ವಧರ್ಮೀಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್, ಎಎಸ್ಪಿ ಶಿಲ್ಪಾ ದೇವಸ್ಯ ನೇತೃತ್ವದ ಪೊಲೀಸ್ ತಂಡ ಮಾಹಿತಿ ಕಲೆ ಹಾಕಿದೆ.