ಕಾಸರಗೋಡು, (Daijiworld News/MSP): ಎರಡು ದಿನಗಳ ಹಿಂದೆ ಚಂದ್ರಗಿರಿ ಸೇತುವೆಯಿಂದ ನದಿಗೆ ಹಾರಿದ್ದ ವ್ಯಕ್ತಿಯ ಮೃತದೇಹ ಆ. 19 ರ ಸೋಮವಾರ ಪತ್ತೆಯಾಗಿದೆ. ಅಣಂಗೂರಿನ ಕೆ. ಅಶೋಕ್ (೪೫)ರವರ ಮೃತದೇಹ ಇಂದು ಮಧ್ಯಾಹ್ನ ಚೆಮ್ನಾಡ್ ಹೊಳೆಯಲ್ಲಿ ಪತ್ತೆಯಾಗಿದೆ. ಶನಿವಾರ ಮಧ್ಯಾಹ್ನ ಚಂದ್ರಗಿರಿ ಸೇತುವೆಯಿಂದ ಅಶೋಕ್ ನದಿಗೆ ಹಾರಿದ್ದರು.ಇವರು ಬಡಗಿ ವೃತ್ತಿ ನಡೆಸುತ್ತಿದ್ದರು.
ಸೇತುವೆ ಬಳಿ ಇವರ ಸ್ಕೂಟರ್ ನಿಲ್ಲಿಸಿದ ಬಳಿಕ ಜನರು ನೋಡುತ್ತಿದ್ದಂತೆ ನದಿಗೆ ಹಾರಿದ್ದು, ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ತಲಪಿದ ಅಗ್ನಿಶಾಮಕ ದಳದ ಸಿಬಂದಿಗಳು , ಪೊಲೀಸರು ಹಾಗೂ ಸ್ಥಳೀಯರು ಶೋಧ ನಡೆಸಿದ್ದರು.
ಸ್ಕೂಟರ್ ನಿಂದ ಅಶೋಕ್ ರವರ ಮೊಬೈಲ್ ಫೋನ್ ,ಪರ್ಸ್, ಬೈಕ್ ನ ಆರ್ ಸಿ ದಾಖಲೆ ಪತ್ತೆಯಾಗಿತ್ತು. ಇದರಿಂದ ನದಿಗೆ ಹಾರಿದ ವ್ಯಕ್ತಿಯ ಗುರುತು ಪತ್ತೆಯಾಗಿತ್ತು . ಆರ್ಥಿಕ ಮುಗ್ಗಟ್ಟು ಆತ್ಮಹತ್ಯೆಗೆ ಕಾರಣವಾಗಿತ್ತು . ಕೆಲ ಸಮಯದ ಹಿಂದೆ ನಡೆದ ಅಪಘಾತದಲ್ಲಿ ಅಶೋಕ್ ಗಾಯಗೊಂಡಿದ್ದರು ಎಂದು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.