ಕಾಸರಗೋಡು,ಆ 19 (Daijiworld News/RD): ಇಲ್ಲಿನ ಮಂಜೇಶ್ವರ 'ಅವರ್ ಲೇಡಿ ಆಫ್ ಮರ್ಸಿ ಚರ್ಚ್ ' ದುಷ್ಕರ್ಮಿಗಳು ಕಲ್ಲೆಸೆದ ಘಟನೆ ರವಿವಾರ ರಾತ್ರಿ ನಡೆದಿದ್ದು, ಕೃತ್ಯ ಆ.19 ರ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಚರ್ಚಿನ ಎರಡು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.
ಕೃತ್ಯದ ದೃಶ್ಯಾವಳಿಗಳು ಚರ್ಚಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳ ಪೈಕಿ ಓರ್ವ ಕಲ್ಲುಗಳೊಂದಿಗೆ ಚರ್ಚ್ ಆವರಣವನ್ನು ಪ್ರವೇಶಿಸಿ ಕಲ್ಲು ತೂರಾಟ ನಡೆಸಿದ್ದಾನೆ. ಇದರಿಂದ ಚರ್ಚಿನ ಮುಂಭಾಗದ ಎರಡು ಕಿಟಕಿಗಳ ಗಾಜುಗಳಿಗೆ ಹಾನಿಯಾಗಿದೆ. ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಹೆಲ್ಮೆಟ್ಧಾರಿಗಳಾಗಿದ್ದರು.
ಘಟನೆ ಸ್ಥಳಕ್ಕೆ ಆಗಮಿಸಿರುವ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.ಈ ನಡುವೆ ಚರ್ಚಿಗೆ ಕಲ್ಲು ತೂರಾಟ ನಡೆದಿರುವ ಹಿನ್ನೆಲೆಯಲ್ಲಿ ಕ್ರೈಸ್ತ ಬಾಂಧವರು ಚರ್ಚ್ ಆವರಣದಲ್ಲಿ ಜಮಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ , ಬ್ಲಾಕ್ ಪಂಚಾಯತ್ ಅಧ್ಯಕ್ಷ ಎಕೆ ಎಮ್ ಅಶ್ರಫ್ , ನ್ಯಾಯವಾದಿ ಎಂ . ಎಸ್ ಥೋಮಸ್ ಡಿ ಸೋಜ, ವರ್ಕಾಡಿ ಚರ್ಚ್ ಧರ್ಮಗುರು ಫಾದರ್ ಫ್ರಾನ್ಸಿಸ್ ರೊಡ್ರಿಗಸ್, ರಾಜಕೀಯ ಪಕ್ಷದ ಮುಖಂಡರಾದ ಕೆ. ಆರ್ ಜಯಾನಂದ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.