ಮಂಗಳೂರು, ಆ 18 (DaijiworldNews/SM): ಶಿಕ್ಷಣ, ಉದ್ಯೋಗ, ವ್ಯಾಪಾರ ಹೀಗೆ ವಿವಿಧ ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರ ಮಂಗಳೂರು. ಸ್ಮಾರ್ಟ್ ಸಿಟಿಯಾಗುತ್ತಿರುವ ಮಂಗಳೂರಿನಲ್ಲಿ ಜನರಿಗೆ ಹತ್ತು ಹಲವು ಸಮಸ್ಯೆಗಳು ಎದುರಾಗಿತ್ತಿವೆ. ಇವುಗಳಲ್ಲಿ ಪ್ರಮುಖ ಅಗತ್ಯವಾಗಿರುವ ನಗರದ ರಸ್ತೆಗಳು ಬಹುತೇಕ ಕಡೆಗಳಲ್ಲಿ ಹದಗೆಟ್ಟು ಹೋಗಿದ್ದು ವಾಹನ ಸಂಚಾರವೇ ಹರಸಾಹಸವಾಗುತ್ತಿದೆ.
ಹೊಂಡ ಗುಂಡಿಗಳಿಂದ ಕೂಡಿದ ರಸ್ತೆ, ಇವುಗಳಲ್ಲಿ ಎದ್ದು ಬಿದ್ದು ಸಂಚಾರ ನಡೆಸುತ್ತಿರುವ ವಾಹನಗಳು ಇದು ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿರುವ ಅವ್ಯವಸ್ಥೆಯ ಚಿತ್ರಣ. ಒಂದೆಡೆ ನಗರದಿಂದ ಬೆಂಗಳೂರು ಕೇರಳ, ಕುಂದಾಪುರ ಹೀಗ ವಿವಿಧೆಡೆಗಳಿಗೆ ಸಂಚರಿಸುವ ಹೆದ್ದಾರಿಗಳು ಅವ್ಯವಸ್ಥೆಯಿಂದ ಕೂಡಿದ್ದರೆ, ಈ ಎಲ್ಲಾ ಪ್ರದೇಶಗಳಿಗೆ ಸಂಚರಿಸುವ ಇರುವಂತಹ ನಗರದ ನಂತೂರು ವೃತ್ತ ಅವ್ಯವಸ್ಥೆಯಿಂದ ಕೂಡಿದೆ. ನಂತೂರು ವೃತ್ತ ಹೊಂಡಗುಂಡಿಗಳಿಂದ ಕೂಡಿದ್ದು, ವಾಹನ ಸಂಚಾರವೇ ಇಲ್ಲಿ ಹರ ಸಾಹಸವಾಗಿ ಪರಿಣಮಿಸಿದೆ. ದ್ವಿಚಕ್ರ ವಾಹನ ಸವಾರರು ಸೇರಿದಂತೆ ಎಲ್ಲರೂ ಇಲ್ಲಿ ಸಂಚರಿಸುವ ವೇಳೆ ಎಲ್ಲಿಲ್ಲದ ಸಂಕಷ್ಟವನ್ನು ಎದುರಿಸುತ್ತಾರೆ.
ಹೆದ್ದಾರಿಯಲ್ಲಿನ ಅವ್ಯವಸ್ಥೆಯಿಂದಾಗಿ ಇಲ್ಲಿ ವಾಹನ ಸಂಚಾರಕ್ಕೆ ತೊಂದರೆ ಎದುರಾಗುತ್ತಿದ್ದು, ಹಲವು ತಾಸುಗಳ ಕಾಲ ಇಲ್ಲಿ ಟ್ರಾಫಿಕ್ ಜಾಂ ಉಂಟಾಗುತ್ತದೆ. ಇದನ್ನು ನಿಭಾಯಿಸುವುದೇ ಇಲ್ಲಿ ಸವಾಲಾಗಿ ಪರಿಣಮಿಸುತ್ತದೆ. ಇನ್ನು ಹೆದ್ದಾರಿ ಮಾತ್ರವಲ್ಲದೆ, ನಗರ ಹಲವು ರಸ್ತೆಗಳು ಹದಗೆಟ್ಟಿದ್ದು, ಸಂಚಾರವೇ ದುಸ್ಥರವಾಗಿ ಪರಿಣಮಿಸಿದೆ. ಇನ್ನು ರಸ್ತೆಯಲ್ಲಿರುವ ಹೊಂಡಗುಂಡಿಗಳಲ್ಲಿ ನೀರು ತುಂಬಿದ ಪರಿಣಾಮ ದ್ವಿಚಕ್ರ ವಾಹನ ಸವಾರರಿಗೆ ಇದರ ಅರಿವಾಗದೆ ಹಲವು ಸಲ ಅಪಘಾತಗಳು ಸಂಭವಿವೆ.
ಅಲ್ಲದೆ ಘಟನ ವಾಹನಗಳು ವೇಗವಾಗಿ ಚಲಿಸುವ ವೇಳೆ ಪಾದಚಾರಿಗಳ ಮೇಲೆ ಕೆಸರು ನೀರಿನ ಸಿಂಚನವಾಗುತ್ತಿದೆ. ಇನ್ನು ರಸ್ತೆ ಅವ್ಯವಸ್ಥೆಯಿಂದಾಗಿ ಈಗಾಗಲೇ ಹಲವು ಅಪಘಾತಗಳು ಕೂಡ ಸಂಭವಿಸಿವೆ. ವಾಹನ ಸಂಚಾರದ ಬಗ್ಗೆ ಹತ್ತು ಹಲವು ನಿಯಮಗಳನ್ನು ಜಾರಿಗೊಳಿಸುವವರು ರಸ್ತೆ ಅವ್ಯವಸ್ಥೆ ಸರಿಪಡಿಸಲು ಯಾಕೆ ಮುಂದಾಗುತ್ತಿಲ್ಲ ಎನ್ನುವುದು ಸಾರ್ವಜನಿಕ ವಲಯದ ಪ್ರಶ್ನೆಯಾಗಿದೆ. ಇನ್ನು ನಗರದಲ್ಲಿ ಸುರಿದ ಒಂದೇ ಒಂದು ಭಾರೀ ಮಳೆಗೆ ರಸ್ತೆಗಳು ತಮ್ಮ ನೈಜ ಅವಸ್ಥೆಯನ್ನು ಬಹಿರಂಗಪಡಿಸಿವೆ. ಕಳಪೆ ಕಾಮಗಾರಿಯಿಂದಾಗಿ ರಸ್ತೆಗಳು ಹದಗೆಡುತ್ತಿದ್ದು, ವಾಹನ ಸವಾರರು ಪ್ರಾಣ ಪಣದಲ್ಲಿಟ್ಟು ಸಂಚಾರಿಸುವಂತಾಗಿದೆ ಎನ್ನೋದು ಸಾರ್ವಜನಿಕರ ಮಾತು.
ಒಟ್ಟಿನಲ್ಲಿ ಸ್ಮಾರ್ಟ್ ಸಿಟಿಯಾಗುತ್ತಿರುವ ಮಂಗಳೂರು ನಗರದಲ್ಲಿ ರಸ್ತೆಗಳು ಸ್ಮಾರ್ಟ್ ಆಗಿ ತನ್ನ ನೈಜತೆಯನ್ನು ಕಳೆದುಕೊಳ್ಳುತ್ತಿವೆ. ಈ ಬಗ್ಗೆ ಸಂಬಂಧಿಸಿ ಇಲಾಖೆ ಜನ ನಾಯಕರು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.