ಕಾಸರಗೋಡು, ಆ 18 (DaijiworldNews/SM): ಮಂಜೇಶ್ವರ ಕುಂಡುಕೊಳಕೆ ಪರಿಸರದಲ್ಲಿ ಮರಳು ಮಾಫಿಯಾದ ಅಟ್ಟಹಾಸ ಮುಂದುವರಿದಿದ್ದು, ಆದಿತ್ಯವಾರ ಅಂಜಾರೆಯ ಮನೆಯೊಂದಕ್ಕೆ ನುಗ್ಗಿದ ಮರಳು ಮಾಫಿಯಾ ತಂಡವೊಂದು ದಾಂಧಲೆ ನಡೆಸಿದ್ದು, ಮನೆಯಲ್ಲಿದ್ದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ.
ಮಧ್ಯಾಹ್ನ ಮನೆಗೆ ನುಗ್ಗಿದ ತಂಡವು ಮನೆ ಮಾಲಕ ಫೆಲಿಕ್ಸ್ ಡಿ ಸೋಜ ಹಾಗೂ ಪತ್ನಿ ರೀಟಾ ಡಿ ಸೋಜರವರ ಮೇಲೆ ಹಲ್ಲೆ ನಡೆಸಿದ್ದು, ರೀಟಾ ಡಿ ಸೋಜ ಗಂಭೀರ ಗಾಯಗೊಂಡಿದ್ದಾರೆ.
ಮಧ್ಯಾಹ್ನ ಊಟ ಮಾಡುತ್ತಿದ್ದಾಗ ಮನೆಗೆ ನುಗ್ಗಿದ ತಂಡ ಕಲ್ಲು, ಮರದ ತುಂಡುಗಳಿಂದ ಹಲ್ಲೆ ನಡೆಸಿದೆ.
ಬಳಿಕ ತಂಡವು ಮನೆಯ ಕಿಟಿಕಿ ಗಾಜುಗಳನ್ನು ಹುಡಿ ಮಾಡಿದ್ದು, ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಹಾನಿಗೊಳಿಸಿದೆ. ಕುಂಡುಕೊಳಕೆ ಬೀಚ್ ಪರಿಸರದಿಂದ ಭಾರೀ ಪ್ರಮಾಣದಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದು, ಎರಡು ದಿನಗಳ ಹಿಂದೆ ನಾಗರಿಕರು ತಡೆದು ಪೊಲೀಸರಿಗೊಪ್ಪಿಸಿದ್ದರು.
ಅಕ್ರಮ ಮರಳುಗಾರಿಕೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ನಡುವೆ ಮರಳು ಮಾಫಿಯಾ ಮತ್ತೆ ದಾಂಧಲೆ ನಡೆಸಿದೆ.