ಮಂಗಳೂರು, ಆ 17 (DaijiworldNews/SM): ನಗರದ ಕೇಂದ್ರ ಮಾರುಕಟ್ಟೆಯಲ್ಲಿ ತ್ಯಾಜ್ಯದ ರಾಶಿಯೇ ಗ್ರಾಹಕರನ್ನು ಸ್ವಾಗತಿಸುತ್ತದೆ. ಮಾರುಕಟ್ಟೆಯಲ್ಲಿನ ವ್ಯಾಪಾರಸ್ತರು ಬೀದಿಯಲ್ಲೇ ತ್ಯಾಜ್ಯವನ್ನು ಸುರಿಯುತ್ತಿದ್ದಾರೆ. ಆದರೆ ಇವುಗಳನ್ನು ಸ್ವಚ್ಛ ಮಾಡುವ ವಿಚಾರಕ್ಕೆ ಯಾರೂ ಕೂಡ ಮುಂದಾಗುತ್ತಿಲ್ಲ.
ವ್ಯಾಪಾರಿಗಳೆಲ್ಲರೂ ತಮ್ಮ ತಮ್ಮ ವ್ಯಾಪಾರ ಮುಗಿಸಿ ಹಣ ಸಂಪಾದಿಸುವುದನ್ನು ಬಿಟ್ಟರೆ ಈ ಮಾರುಕಟ್ಟೆ ಪರಿಸರವನ್ನು ಸ್ವಚ್ಚವಾಗಿಡುವಲ್ಲಿ ಕೈ ಜೋಡಿಸುತ್ತಿಲ್ಲ ಎಂಬುವುದು ಸಾರ್ವಜನಿಕರ ಆರೋಪವಾಗಿದೆ.ಮಾರುಕಟ್ಟೆಯ ಹೊರಗಡೆ ಪಾಲಿಕೆಯ ಕಸದ ಲಾರಿ ನಿಂತಿದ್ದರೂ ತ್ಯಾಜ್ಯವನ್ನು ಮಾತ್ರ ರಸ್ತೆ ಪಕ್ಕದಲ್ಲೇ ಸುರಿಯಲಾಗುತ್ತಿದೆ. ಅಧಿಕ ಹಣ ಸಂಪಾದನೆ ಮಾಡುವ ಆಸೆಯಿಂದ ಕಸಗಳನ್ನು ಉದ್ದೇಶಪೂರ್ವಕವಾಗಿಯೇ ರಸ್ತೆ ಬದಿಯಲ್ಲಿ ರಾಶಿ ಹಾಕುತ್ತಾರೆ ಎಂಬುವುದು ಸ್ಥಳೀಯರ ಮಾತು.
ಈ ಬಗ್ಗೆ ಅಲ್ಲಿಯ ಸ್ಥಳೀಯರು ಹಾಗೂ ಟೆಂಪೋ ಚಾಲಕರು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಬಲಪ್ರದರ್ಶನಕ್ಕೆ ಮುಂದಾಗಿರುವ ಉದಾಹರಣೆಗಳನ್ನು ಚಾಳಕರು ನೆನಪಿಸಿಕೊಳ್ಳುತ್ತಾರೆ. ಕಳೆದ ಕೆಲವು ವರ್ಷಗಳಿಂದ ಇಲ್ಲಿಯ ಮನಪಾ ಸದಸ್ಯೆಯಾಗಿದ್ದವರು ಈ ಸಮಸ್ಯೆಯ ಬಗ್ಗೆ ಪಾಲಿಕೆಯ ಕಮೀಷನರ್, ಆರೋಗ್ಯ ಅಧಿಕಾರಿಗಳು ಹಾಗೂ ಮಾರುಕಟ್ಟೆ ವ್ಯಾಪಾರಸ್ತರ ಸಂಘದವರಿಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸಮಸ್ಯೆಯ ಬಗ್ಗೆ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದ್ದರೂ ಮಾರುಕಟ್ಟೆ ಸಂಘದವರು ಎಚ್ಚೆತ್ತುಕೊಂಡಿಲ್ಲ.
ತ್ಯಾಜ್ಯದ ರಾಶಿಯಿಂದಾಗಿ ಪರಿಸರದಲ್ಲಿ ಗಬ್ಬು ವಾಸನೆ ಬೀರುತ್ತಿದೆ. ಮಾತ್ರವಲ್ಲದೆ, ನಡೆದಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.