ಉಡುಪಿ, ಆ 17 (DaijiworldNews/SM): ಮಲ್ಪೆ ಸಮುದ್ರ ತೀರದಲ್ಲಿ ಮೀನುಗಾರಿಕೆ ಬಂದಿದ್ದ ಕೇರಳ ಮೂಲದ ಎರಡು ಹಾಗೂ ತಮಿಳುನಾಡು ಮೂಲದ ಒಂದು ಮೀನುಗಾರಿಕಾ ದೋಣಿಗಳನ್ನು ಹಾಗೂ ಅದರಲ್ಲಿದ್ದ ಮೀನುಗಾರರನ್ನು ಮಲ್ಪೆ ಕರಾವಳಿ ಕಾವಲು ಪಡೆಯ ಪೊಲೀಸ್ ಅಧಿಕಾರಿಗಳು ಹಾಗೂ ಮಲ್ಪೆ ಪೊಲೀಸ್ ಠಾಣೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಉಗ್ರರು ನುಸುಳಿರುವ ಮಾಹಿತಿ ಹಿನ್ನೆಲೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇರುವುದರಿಂದ ಉಡುಪಿಯ ಕೃಷ್ಣ ಮಠ, ಮಲ್ಪೆ ಬಂದರು ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಪೋಲಿಸರು ತೀವ್ರ ತಪಾಸಣೆ ನಡೆಸುತಿದ್ದಾರೆ. ಈ ವೇಳೆ ಪರವಾನಿಗೆ ಇಲ್ಲದೆ ಬಂದರನ್ನು ಪ್ರವೇಶಿಸಿದ್ದ ಮೂರು ಬೋಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ತಮಿಳುನಾಡು ಮೂಲದ ಬೋಟ್ ನಲ್ಲಿ ತಾಂತ್ರಿಕ ಸಮಸ್ಯೆ ಇದ್ದು ರಿಪೇರಿಗಾಗಿ ಮಲ್ಪೆ ಬಂದರಿಗೆ ಆಗಮಿಸಿತ್ತು ಎಂದು ತಿಳಿದುಬಂದಿದೆ.
ಈ ಬಗ್ಗೆ ವಿಚಾರಣೆ ಮುಂದುವರೆದಿದೆ.