ಕಡಬ,ಆ 17 (Daijiworld News/RD): ಸಾಮಾಜಿಕ ಜಾಲಾತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ ಮತ್ತು ಮುಖ್ಯಮಂತ್ರಿ ವಿರುದ್ಧ ನಿಂದನಾತ್ಮಕ ಪೋಸ್ಟ್ ಗಳನ್ನು ಶೇರ್ ಮಾಡಿದ ಕಡಬದ ಸರ್ವೇ ಕಚೇರಿಯ ಸಿಬ್ಬಂದಿ ಮಹೇಶ್ ಅವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಕೇಸು ದಾಖಲಾಗಿದೆ.
ಆರೋಪಿ ಮಹೇಶ್ ಕಳೆದ ಹಲವು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಮತ್ರಿ ಯಡಿಯೂರಪ್ಪ ಹಾಗು ಆರೆಸ್ಸೆಸ್ ಕುರಿತು ಅವಹೇಳನಕಾರಿ ಹಾಗು ಅತ್ಯಂತ ಕೀಳುಮಟ್ಟದ ಸಂದೇಶಗಳನ್ನು ತನ್ನ ಫೇಸ್ ಬುಕ್ ಹಾಗೂ ವಾಟ್ಸಾಪ್ ಮೂಲಕ ಶೇರ್ ಮಾಡಿದ್ದು, ಹೀಗಾಗಿ ಆತ ಸರಕಾರಿ ಸೇವಾ ನಿಯಮ ಉಲ್ಲಂಘಿಸಿದ್ದು ಆತನನ್ನು ಕೂಡಲೇ ಸೇವೆಯಿಂದ ವಜಾಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜಾಗರಣ ವೇದಿಕೆ ಪ್ರಧಾನ ಕಾರ್ಯದರ್ಶಿ ವೆಂಕಟ್ರಮಣ ಕೋಡಿಂಬಾಳ ಅವರು ಕಡಬ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರು ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕು, ಇಲ್ಲವಾದಲ್ಲಿ ಕಡಬ ತಾಲೂಕು ಬಂದ್ ಗೆ ಕರೆ ನೀಡಿ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂ ಜಾಗರಣ ವೇದಿಕೆ ಪ್ರಧಾನ ಕಾರ್ಯದರ್ಶಿ ವೆಂಕಟ್ರಮಣ ಕೋಡಿಂಬಾಳಎಚ್ಚರಿಕೆ ನೀಡಿದ್ದಾರೆ.