ಕಾಸರಗೋಡು,ಆ 17 (Daijiworld News/RD): ಬರ,ನೆರೆ, ಕಾಡುಪ್ರಾಣಿ ಪಕ್ಷಿಗಳ ಕಾಟದಿಂದ ಕಂಗೆಟ್ಟಿರುವ ಕೃಷಿಕರಿಗೆ ಇದೀಗ ಮಾರಕ ಹುಳಗಳ ಉಪಟಳ ನುಂಗಲಾರದ ತುತ್ತಾಗಿ ಪರಿಣಿಮಿಸಿದೆ. ಪೈವಳಿಕೆ ಮತ್ತು ಮೀ೦ಜ ಗ್ರಾಮ ಪಂಚಾಯತ್ ನ ಕೃಷಿಕರು ಅನುಭವಿಸುತ್ತಿರುವ ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದೆ . ಪೈವಳಿಕೆ ಮತ್ತು ಮೀ೦ಜ ಗ್ರಾಮಪಂಚಾಯತ್ ನ ಕಳ್ಳಿಗೆ, ಮಂಜಲ್ತೊಡಿ, ಕಲ್ಲೆಕ್ಕಾರ್, ಬೆದ್ರಡಿ, ಕನ್ಯಾನ ಪರಿಸರ ವ್ಯಾಪ್ತಿಯಲ್ಲಿ ಇದೀಗ ಆಫ್ರಿಕನ್ ಹುಳದ ಕಾಟ ಉಂಟಾಗಿದ್ದು, ಪರಿಸರದ ಜನತೆಯು ಅಡಕತ್ತರಿಯಲ್ಲಿ ಸಿಲುಕುವಂತೆ ಮಾಡಿದೆ.
ಒಂದೆಡೆ ಬೆಳೆದ ಬೆಳೆಗಳಿಗೆ ಬೆಲೆ ಕುಸಿತ, ಕಂಗು, ತೆಂಗು, ಭತ್ತಕ್ಕೆ ರೋಗ, ಇನ್ನೊಂದೆಡೆ ಕಷ್ಟಪಟ್ಟು ಬೆಳೆದ ಬೆಳೆ, ಬ್ಯಾಂಕ್ ನಿಂದ ಪಡೆದ ಸಾಲ ಮರುಪಾವತಿಸಲು ಸಾಧ್ಯವಾಗದೆ ಕಷ್ಟ ಪಡುತ್ತಿದ್ದು, ಜೊತೆಗೆ ಇದೀಗ ಆಫ್ರಿಕನ್ ಹುಳುಗಳ ಕಾಟ ಕೃಷಿಕರ ಹಾಗೂ ಪರಿಸರದವರ ನಿದ್ದೆಗೆಡಿಸಿದೆ. ಚಿಪ್ಪಿನೊಳಗಿರುವ ಈ ಹುಳು ತೆಂಗು, ಕಂಗಿನ ಹಿಂಗಾರ, ಬಾಳೆ, ಭತ್ತ, ತರಕಾರಿಗಳನ್ನು ತಿಂದು ನಾಶ ಮಾಡುತ್ತಿದೆ. ಕೃಷಿ ತೋಟಗಳನ್ನು ಆಕ್ರಮಿಸಿಕೊಂಡಿದೆ. ಇವುಗಳು ಯಾವುದೇ ಗಿಡವನ್ನು ಆಕ್ರಮಿಸಿದರೆ ಅದರಲ್ಲಿನ ಎಲ್ಲ ಎಲೆಗಳನ್ನು ತಿಂದು ಗಿಡಗಳನ್ನು ನಾಶಮಾಡದೇ ಇಳಿಯುವುದಿಲ್ಲ. ಭತ್ತ, ಅಡಕೆ, ತೆಂಗು ಹುಳಗಳ ಪ್ರಮುಖ ಆಹಾರವಾಗಿದೆ. ಹುಳ ಗದ್ದೆಗೆ ಇಳಿದು ಎಲ್ಲ ಪೈರುಗಳನ್ನು ನಾಶಮಾಡುತ್ತಿದೆ. ಅಲ್ಲದೆ ತೆಂಗಿನ ಮರದ ಬೇರುಗಳನ್ನು ತಿಂದು ಮರವೇರುವ ಈ ಹುಳು ತೆಂಗಿನ ಹಿಂಗಾರ, ಅಡಕೆ ಹಿಂಗಾರ, ಗರಿಗಳನ್ನು ತಿಂದು ಮರವನ್ನೇ ನಾಶ ಮಾಡುವಷ್ಟರ ಮಟ್ಟಿಗೆ ಮುಂದುವರಿಯುತ್ತದೆ. ತರಕಾರಿ, ಬಸಳೆ, ಸುವರ್ಣಗೆಡ್ಡೆ, ಕೆಸುಗಳನ್ನು ಕೂಡ ನಾಶ ಮಾಡುತ್ತಿವೆ.
ರಾತ್ರಿಯಾಗುತ್ತಿದ್ದಂತೆ ಇದರ ಉಪಟಳ ಹೆಚ್ಚ್ಗಾಗಿದೆ. ಮನೆಯ ಗೋಡೆಗಳಲ್ಲೂ ಪ್ರತ್ಯಕ್ಷಗೊಳ್ಳುತ್ತಿದ್ದು, ಪೈಂಟ್ (ಬಣ್ಣವನ್ನು) ಕಿತ್ತುಹಾಕುತ್ತಿದೆ. ಮನೆಯೊಳಗೂ ಪ್ರವೇಶಿಸಿ ಸಮಸ್ಯೆ ಹೆಚ್ಚಿಸುತ್ತಿದೆ. ಏಪ್ರಿಲ್, ಮೇ ತಿಂಗಳಲ್ಲಿ ಬರಗಾಲದಿಂದ ಈ ಪ್ರದೇಶದ ನೂರಾರು ಸ್ಥಳದ ಕೃಷಿಕರಿಗೆ ಮಾರಕವಾಗಿ ಪರಿಣಮಿಸಿತ್ತು. ಇದರ ಬೆನ್ನಿಗೆ ಹುಳುಗಳ ಕಾಟ ಬದುಕನ್ನೇ ಕಸಿದುಕೊಂಡಿದೆ. ಹೊಳೆಯ ನರೆನೀರಿನಲ್ಲಿ ಬಂದು ದಡ ಸೇರಿ ಪಕ್ಕದ ಕೃಷಿ ತೋಟಗಳಲ್ಲಿ ಸೇರಿ ಸಂಸಾರ ಮಾಡುವ ಈ ಹುಳು ಇಡೀ ಪರಿಸರಕ್ಕೆ ಸಮಸ್ಯೆಯಾಗಿ ಕಾಡುತ್ತಿದೆ. ಅಪಾಯಕಾರಿ ಆಫ್ರಿಕನ್ ಬಸವನಹುಳು ಕೃಷಿ ಸಹಿತ ಮಾನವನ ಆರೋಗ್ಯಕ್ಕೂ ಅಪಾಯಕಾರಿ ಆಫ್ರಿಕನ್ ಬಸವನಹುಳುಗಳು ಕೃಷಿ ಸಹಿತ ಮಾನವನ ಆರೋಗ್ಯದ ಮೇಲೂ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತವೆ. 500 ಕ್ಕೂ ಹೆಚ್ಚಿನ ಕೃಷಿಯನ್ನು ನಾಶಪಡಿಸುವ ಬೃಹತ್ ಬಸವನಹುಳುಗಳು ತೆಂಗು, ಕಂಗು, ಭತ್ತದ ಸಹಿತ ಹಲವು ಕೃಷಿ ಸಸ್ಯಗಳ ಎಸಳುಗಳನ್ನು ಅಪರಿಮಿತವಾಗಿ ತಿನ್ನುತ್ತವೆ. ನೆಮಟೋಡ್ ಎಂಬ ಪ್ಯಾರಸೈಟ್ ಹೊತ್ತೊಯ್ಯುವ ಆಫ್ರಿನ್ ಬಸವನಹುಳುಗಳು ಮನುಷ್ಯರಲ್ಲಿ ತುರಿಕೆ, ಚರ್ಮ ರೋಗವನ್ನು ಹರಡುತ್ತವೆ. ಇದರಿಂದ ಪರಿಸರದಲ್ಲಿನ ಮಕ್ಕಳ , ಮಹಿಳೆಯರ ಸೇರಿದಂತೆ ಮಾನವ ದೇಹದ ಮೇಲೆ ಪರಿಣಾಮ ಬೀರಬಹುದೇ ಎಂಬ ಆತಂಕ ಪರಿಸರವಾಸಿಗಳಲ್ಲಿ ಕಾಡಿದೆ.
ದಿನದಿಂದ ದಿನಕ್ಕೆ ಹುಳುಗಳ ಸಂಖ್ಯೆ ಹೆಚ್ಚಾಗುತ್ತಿದ್ದು , ಆದರೆ ಇದನ್ನು ರಾಸಾಯನಿಕ ಸಿಂಪಡಿಸಿ ನಿರ್ಮೂಲನೆ ಮಾಡುವುದು ರೈತರಿಗೆ ಸಮಸ್ಯೆ ಜೊತೆಗೆ ದುಬಾರಿ ವೆಚ್ಚ ಕೂಡಾ ಬೀಳಲಿದ್ದು , ಸುಲಭವಾಗಿ ಹುಳುಗಳನ್ನು ನಿರ್ಮೂಲನೆ ಮಾಡುವಂತಿಲ್ಲ . ಆರೋಗ್ಯ ಸಮಸ್ಯೆಗೂ ಇದು ಕಾರಣವಾಗಲಿದೆ. ಇದರಿಂದ ಕೂಡಲೇ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ನೀಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದು, ಸಮಸ್ಯೆ ಕೂಡಲೇ ಪರಿಹರಿಸದಿದ್ದಲ್ಲಿ ಈ ಪರಿಸರದ ನೂರಾರು ಕೃಷಿಕರ ಬದುಕು ಏನೆಂಬುದು ಪ್ರಶ್ನೆಯಾಗಿ ಉಳಿದಿದುಕೊಂಡಿದೆ.