ಉಳ್ಳಾಲ, ಆ 16 (Daijiworld News/MSP): ಮಾಣಿ-ಉಳ್ಳಾಲ ರಸ್ತೆಯ ಪಂಡಿತ್ ಹೌಸ್ ಜಂಕ್ಷನ್ನಿನಲ್ಲಿ ನಿರ್ಮಾಣವಾಗಿರುವ ಮರಣ ಗುಂಡಿಯ ಕುರಿತು ಸಂಬಂಧಿತ ಇಲಾಖೆ ನಿರ್ಲಕ್ಷ್ಯ ವಹಿಸಿರುವ ವಿರುದ್ಧ ವಿಜಯ ಗೇಮ್ಸ್ ಟೀಂ ತಂಡದ ನೇತೃಥ್ವದಲ್ಲಿ ರಸ್ತೆಯಲ್ಲಿನ ದೊಡ್ಡ ಗಾತ್ರದ ಹೊಂಡದಲ್ಲಿ ಕಾಗದದ ದೋಣಿ ಬಿಡುವ ಮೂಲಕ ಪ್ರತಿಭಟನೆ ನಡೆಯಿತು.
ಮಾಣಿ-ಉಳ್ಳಾಲ ರಾಜ್ಯ ಹೆದ್ದಾರಿ ರಸ್ತೆಯ ಪಂಡಿತ್ ಹೌಸ್ ಜಂಕ್ಷನ್ನಿನಲ್ಲಿ ಹೊಂಡ ನಿರ್ಮಾಣವಾಗಿದೆ. ಮಳೆ ಆರಂಭವಾಗುವ ಮುನ್ನವೇ ರಸ್ತೆ ಡಾಮಾರು ಕಿತ್ತುಹೋಗಿತ್ತು. ಮಳೆ ನಂತರ ಹೊಂಡ ದೊಡ್ಡದಾಗುತ್ತಲೇ ಇದೀಗ ಈಜುಕೊಳದಂತೆ ಆಗಿದೆ. ದಿನನಿತ್ಯ ಸಾವಿರಾರು ವಾಹನಗಳು ತೆರಳುವ ರಸ್ತೆಯಲ್ಲಿ ಹೊಂಡದಿಂದಾಗಿ ಹಲವು ಅಪಘಾತಗಳು ಸಂಭವಿಸುತ್ತಲೇ ಇದೆ. ರಾತ್ರಿ ಹೊತ್ತಿನಲ್ಲಿ ಅನೇಕ ದ್ವಿಚಕ್ರ ವಾಹನಗಳು ಹೊಂಡದೊಳಕ್ಕೆ ಬಿದ್ದು ರಸ್ತೆಗೆ ಅಡ್ಡವಾಗಿ ಬೀಳುತ್ತಿದೆ. ಅ.೧೪ ರಂದು ಇಬ್ಬರು ಮಕ್ಕಳು ಹಾಗೂ ದಂಪತಿಯಿದ್ದ ಸ್ಕೂಟರ್ ಹೊಂಡದೊಳಕ್ಕೆ ಬಿದ್ದು ಕುಟುಂಬದ ನಾಲ್ವರು ಗಾಯಗೊಂಡಿದ್ದರು. ನಿರಂತರ ಅಪಘಾತಗಳು ಸಂಭವಿಸುತ್ತಿದ್ದರೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮೌನ ಧೋರಣೆಯನ್ನು ಅನುಸರಿಸುತ್ತಿರುವುದನ್ನು ಖಂಡಿಸಿ ವಿಜಯಗೇಮ್ಸ್ ಟೀಂ ತಂಡದವರು ರಸ್ತೆ ಹೊಂಡದಲ್ಲಿ ಪೇಪರ್ ದೋಣಿಯನ್ನು ಬಿಡುವ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ವಿ.ಜಿ.ಟಿ ತಂಡದ ಅಧ್ಯಕ್ಷ ಗುರುಪ್ರಸಾದ್ ಮಾತನಾಡಿ, ತಂಡದಿಂದ ಹೊಂಡವನ್ನು ಕಲ್ಲು, ಮಣ್ಣು, ಜಲ್ಲಿಕಲ್ಲಿನ ಮೂಲಕ ಮುಚ್ಚುವ ಪ್ರಯತ್ನ ಹಲವು ಬಾರಿ ನಡೆದಿತ್ತು. ಆದರೆ ಯಾವುದೇ ಪ್ರಯೋಜನವಿಲ್ಲ . ಮತ್ತೆ ನೀರು ಇಕ್ಕಟ್ಟಾಗಿ ಪುನ: ಹೊಂಡ ನಿರ್ಮಾಣವಾಗುತ್ತಿದೆ. ಸಮೀಪದಲ್ಲೇ ಕಾಂಕ್ರೀಟಿಕರಣಗೊಳಿಸಿದ ಒಳಚರಂಡಿಯನ್ನು ನಿರ್ಮಿಸಲಾಗಿದೆ. ಅದು ಮಣ್ಣಿನಿಂದ ಮುಚ್ಚಿಹೋಗಿರುವುದರಿಂದ ರಸ್ತೆಯಲ್ಲೇ ನೀರು ಹರಿದು, ನಿಂತು ಹೊಂಡ ನಿರ್ಮಾಣವಾಗುತ್ತಿದೆ. ಈ ಕುರಿತು ನಾಗರಿಕ ಹಿತರಕ್ಷಣಾ ವೇದಿಕೆ ಮತ್ತು ವಿಜಿಟಿ ನೇತೃತ್ವದಲ್ಲಿ ಉಳ್ಳಾಲ ನಗರಸಭೆ ಪೌರಾಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಆದರೆ ಈವರೆಗೆ ಸ್ಪಂಧನೆ ಸಿಕ್ಕಿಲ್ಲ. ಇದೀಗ ನಡೆಸಿದ ಪ್ರತಿಭಟನೆ ಸಾಂಕೇತಿಕವಾಗಿದೆ. ಮುಂದೆ ಹೊಂಡವನ್ನು ಮುಚ್ಚದೇ ಇದ್ದಲ್ಲಿ ಉಗ್ರ ರೀತಿಯಾಗಿ ಹೋರಾಡುವುದು ಅನಿವಾರ್ಯ ಎಂದರು. ಈ ವೇಳೆ ರಾಜ್ ಗೋಪಾಲ್ ಪಂಡಿತ್ ಹೌಸ್, ರಾಘವೇಂದ್ರ, ಮಿತೇಶ್, ಜಿತೇಶ್ , ಧನರಾಜ್, ಮನೋಹರ್ , ನಿತೇಶ್, ಭರತ್ , ಗಣೇಶ್, ಅಕ್ಷಯ್ , ರಾಜೇಶ್, ಹಿರಿಯರಾದ ರಾಘವ ಪೂಜಾರಿ ಉಪಸ್ಥಿತರಿದ್ದರು.