ಕಾರ್ಕಳ,ಆ 16 (Daijiworld News/RD): ನಿಟ್ಟೆ ಗ್ರಾಮದ ಪರಪ್ಪಾಡಿ ಅರ್ಬಿ ಪಾಲ್ಸ್ನಲ್ಲಿ ಸೆಲ್ಫಿ ತೆಗೆಯುವ ಭರದಲ್ಲಿ ಯುವಕ ನೀರು ಪಾಲಾಗಿದ್ದು, ಸಮೀಪದ ಬಂಡೆಯ ಮೇಲೆ ಯುವಕನ ಮೃತ ದೇಹ ಇಂದು ಪತ್ತೆಯಾಗಿದೆ. ಮೃತ ಯುವಕನನ್ನು ಕಾರ್ಕಳ ತಾಲೂಕಿನ ಮಂಜರಪಲ್ಕೆ ಗ್ರಾಮದ ಸುದೇಶ್ ಕುಲಾಲ್ (26) ಎಂದು ಗುರುತಿಸಲಾಗಿದೆ.
ಸುದೇಶ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಗುರುವಾರ ಮಧ್ಯಾಹ್ನ 2.30ರ ವೇಳೆಗೆ ಅರ್ಬಿ ಪಾಲ್ಸ್ ಗೆ ತೆರಳಿದ್ದು, ಈ ನಾಲ್ವರು ಯುವಕರು ಹೊಳೆಯ ಸಮೀಪದ ಬಂಡೆಯಲ್ಲಿ ನಿಂತು ಸೆಲ್ಫಿ ತೆಗೆಯುತ್ತಿದ್ದರು. ಈ ಸಂದರ್ಭ ಕಾಲು ಜಾರಿ ಸುದೇಶ್ ಹಾಗೂ ಅವರ ಇನ್ನೊಬ್ಬ ಸ್ನೇಹಿತ ಭರತ್ ಹರಿಯುವ ಹೊಳೆಗೆ ಬಿದ್ದಿದ್ದು, ಈ ಸಂದರ್ಭದಲ್ಲಿ ಭರತ್ ಈಜಿಕೊಂಡು ದಡ ಸೇರಿದ್ದು ಆದರೆ ಸುದೇಶ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ಸ್ಥಳಕ್ಕೆ ಕೂಡಲೇ ಅಗ್ನಿಶಾಮಕ ದಳ, ಮುಳುಗುತಜ್ಞರು ಆಗಮಿಸಿ ತೀವ್ರ ಶೋಧ ನಡೆಸಿದ್ದು ಇದೀಗ ಸುದೇಶ್ನ ಮೃತ ದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪುರಂದರ ಹೆಗ್ಡೆ, ಕಾರ್ಕಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮೇಜರ್ ಡಾ.ಹರ್ಷ, ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ನಜೀರ್ ಹುಸೈನ್ ಭೇಟಿ ನೀಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.