ಮಂಗಳೂರು, ಆ.15(Daijiworld News/SS): ವರುಣನ ಆರ್ಭಟ ಹಾಗೂ ಪ್ರವಾಹ ಪರಿಸ್ಥಿತಿಯಿಂದಾಗಿ ತೊಂದರೆಗೀಡಾಗಿರುವ ಸಂತ್ರಸ್ತರಿಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆ ನೆರವು ಯಾಚಿಸಿದೆ.
ಬ್ಲಡ್ ಡೋನರ್ಸ್ ಮಂಗಳೂರು(ರಿ) ತಂಡದ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ ಈ ಕುರಿತು ಮಾತನಾಡಿದ್ದು, ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನೂರಾರು ಜನ ಮನೆ ಮಠ ಕಳೆದುಕೊಂಡಿದ್ದಾರೆ. ಈ ಜಿಲ್ಲೆಗಳ ಸಂಬಂಧ - ಸಂಪರ್ಕದ ಕೊಂಡಿಗಳಾಗಿದ್ದ ರಸ್ತೆಗಳು, ಸೇತುವೆಗಳು ನೀರು ಪಾಲಾಗಿವೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ನೆರವು ನೀಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಬ್ಲಡ್ ಡೋನರ್ಸ್ ಮಂಗಳೂರು(ರಿ) ತಂಡದ ವತಿಯಿಂದ ಈಗಾಗಲೇ ಒಂದು ಹಂತದಲ್ಲಿ ಪರಿಹಾರವನ್ನು ಸಂತ್ರಸ್ತರಿಗೆ ಮುಟ್ಟಿಸಲಾಗಿದ್ದು, ಎರಡನೇ ಹಂತವಾಗಿ ಉತ್ತರ ಕರ್ನಾಟಕದ ನೆರೆ ಪ್ರದೇಶದ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಸಂಗ್ರಹಣಾ ಕಾರ್ಯದಲ್ಲಿ ತೊಡಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ದಾನಿಗಳು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.