ಮಂಗಳೂರು, ಆ 14 (Daijiworld News/SM): ಶಂಕಿತ ಡೆಂಗ್ಯು ಜ್ವರಕ್ಕೆ ನಗರದಲ್ಲಿ ಇನ್ನೋರ್ವ ಯುವಕ ಬುಧವಾರ ಬೆಳಗ್ಗೆ ಬಲಿಯಾಗಿದ್ದಾರೆ. ಆ ಮ್ಮೂಲಕ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯು ಜ್ವರಕ್ಕೆ ಬಲಿಯಾದವರ ಸಂಖ್ಯೆ 10ರ ಗಡಿ ದಾಟಿದೆ.
ನಗರದ ಜಪ್ಪು ಪಟ್ಣ ನಿವಾಸಿ ಗಣೇಶ್ ಕರ್ಕೆರ (35) ಮೃತ ಯುವಕ. ಜ್ವರದ ಹಿನ್ನೆಲೆಯಲ್ಲಿ ಆ.13ರಂದು ನಗರದ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ.
ಗಣೇಶ್ ಸಾವಿಗೆ ಡೆಂಗ್ಯು ಜ್ವರ ಕಾರಣ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ. ಗಣೇಶ್ ಅವರು ಜಪ್ಪಿನ ಸಾಗರ್ ಟ್ರಾವೆಲ್ಸ್ನ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು. ಜಪ್ಪು ಶ್ರೀ ಆದೀಮಹೇಶ್ವರಿ ಭಜನಾ ಮಂದಿರದ ಸದಸ್ಯರಾಗಿದ್ದರು.
ಇನ್ನು ಮೃತ ಗಣೇಶನ ಮನೆಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.