ಮಂಗಳೂರು ಡಿ 20 : ನಗರದ ಕಂಕನಾಡಿ ಜಂಕ್ಷನ್ ರೈಲ್ವೇ ನಿಲ್ದಾಣ ರಸ್ತೆಯನ್ನು 4.05 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು. ಕಂಕನಾಡಿ ಜಂಕ್ಷನ್ ರಸ್ತೆ ವೀಕ್ಷಣೆ ಮಾಡಿ ಮಾತನಾಡಿದ ಅವರು ಮಂಗಳೂರು ಮಹಾನಗರಪಾಲಿಕೆ ಪ್ರೀಮಿಯಮ್ ಎಫ್ ಎ ಆರ್ ನಿಂದ 2.05 ಕೋಟಿ ರೂಪಾಯಿ ಮತ್ತು ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ 2 ಕೋಟಿ ರೂಪಾಯಿ ಮಂಜೂರಾಗಿದ್ದು ಅಭಿವೃದ್ದಿ ಕಾಮಗಾರಿ ವಾರದೊಳಗಾಗಿ ಆರಂಭಿಸಬೇಕು ಎಂದರು. ಮುಂದೆ ಇದರಿಂದ ರೈಲ್ವೇ ನಿಲ್ದಾಣಕ್ಕೆ ಸರಿಯಾದ ಸಮಯದಲ್ಲಿ ಪ್ರಯಾಣಿಕರು ಬರಲು ಅನುಕೂಲವಾಗುತ್ತದೆ ಎಂದು ಹೇಳಿದರು. ರಸ್ತೆ ಕಿರಿದಾಗಿರುವುದರಿಂದ ರಸ್ತೆಯ ಅಗಲೀಕರಣ ಅನಿವಾರ್ಯ ಹಾಗಾಗಿ ಈ ರಸ್ತೆಯನ್ನು ಮಂಗಳೂರು ನಗರಪಾಲಿಕೆ ಮತ್ತು ಸರ್ಕಾರದ ಲೋಕೋಪಯೋಗಿ ಇಲಾಖೆ ವ್ಯವಸ್ಥಿತವಾಗಿ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ತ್ವರಿತವಾಗಿ ನಿರ್ಮಿಸಬೇಕು ಎಂದರು. ಶಾಸಕರೊಂದಿಗೆ ಕಾರ್ಪೊರೇಟರ್ ಪ್ರವಿಣ್ ಚಂದ್ರ ಆಳ್ವ, ಮಹಾನಗರಪಾಲಿಕೆಯ ಉಪಆಯುಕ್ತ (ಅಭಿವೃದ್ಧಿ) ಕೆ.ಎಸ್.ಲಿಂಗೇಗೌಡ, ಜಂಟಿ ನಿರ್ದೇಶಕ ಜಯರಾಜ್, ಟಿಪಿಒ ಬಾಲಕೃಷ್ಣ, ಇಂಜಿನಿಯರ್ ಗಣಪತಿ, ಸ್ಥಳೀಯ ಮುಖಂಡರಾದ ಕೃತಿನ್ ಕುಮಾರ್, ಧನರಾಜ್, ಅನಿಲ್ ಮೊದಲಾದವರಿದ್ದರು.