ಕಾರ್ಕಳ, ಆ 14 (Daijiworld News/MSP): ಯಾವುದೇ ತರದಲ್ಲಿ ತಾರತಮ್ಯೆವೆಸಗದೇ ರಾಜ್ಯದಲ್ಲಿಯೇ ಅತೀ ಹೆಚ್ಚು ಫಲಾನುಭವಿಗಳಿಗೆ ಹಕ್ಕು ನೀಡಿರುವ ಕೀರ್ತಿ, ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸಲ್ಲುತ್ತದೆ. ಕಾರ್ಕಳ ಹಾಗೂ ಹೆಬ್ರಿ ತಾಲೂಕು ಆಡಳಿತದ ಚುರುಕು ಕಾರ್ಯಗಳು ಹಾಗೂ ಗ್ರಾಮ ಪಂಚಾಯತ್ನ ಆಡಳಿತ ವರ್ಗದ ಸಹಕಾರ ಇದಕ್ಕೆ ಕಾರಣವಾಗಿದೆ ಎಂದು ಶಾಸಕ ವಿ.ಸುನೀಲ್ಕುಮಾರ್ ಹೇಳಿದರು.
ತಾಲೂಕು ಪಂಚಾಯತ್ನ ಉಣ್ಣಿಕೃಷ್ಣನ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಕಳ ತಾಲೂಕಿನಲ್ಲಿ ಫಲಾನುಭವಿಗಳಿಗೆ ಕಲಂ 94ಸಿ ಮತ್ತು 94ಸಿಸಿ ಹಕ್ಕು ಪತ್ರ ವಿತರಣೆ ಹಾಗೂ ಪ್ರಾಕೃತಿಕ ವಿಕೋಪ ಫಲಾನುಭವಿಗಳಿಗೆ ಪರಿಹಾರಿ ನೆರವು ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಕೃತಿಕ ವಿಕೋಪದಡಿಯಲ್ಲಿ 62 ಕುಟುಂಬಗಳೀಗೆ ರೂ. 5,17,163 ಪರಿಹಾರ ಧನ ವಿತರಣೆ ಹಾಗೂ ಕಲಂ 94 ಸಿಯಡಿ 21ಮಂದಿಗೆ, ಕಲಂ 94 ಸಿಸಿಯಡಿಯಲ್ಲಿ 56 ಮಂದಿಗೆ ಹಕ್ಕು ಪತ್ರಗಳನ್ನು ಇದೇ ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಹಕ್ಕುಪತ್ರ ಎಂಬುವುದು ಜೀವನದಾಖಲೆಯಾಗಿದೆ. ಅದಿಲ್ಲದೇ ಹೋದರೆ ಮನೆ ನಂಬ್ರ, ವಿದ್ಯುತ್ ಸಂಪರ್ಕ, ಪಡಿತರ ಸವಲತ್ತು ಸೇರಿದಂತೆ ಇತರೆಲ್ಲ ಸವಲತ್ತು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಾರೆ ಎಂದರು. ಉತ್ತರ ಕರ್ನಾಟಕದಲ್ಲಾದಂತೆ ಇಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಾನಿಗಳಾಗಿಲ್ಲ. ಇಲ್ಲಿನ ಸಂತ್ರಸ್ತರಿಗೆ ತುರ್ತಾಗಿ ಪರಿಹಾರ ನೀಡುವಲ್ಲಿ ನಾವು ಸಫಲತೆ ಕಂಡಿದ್ದೇವೆಂದರು.
ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಪ್ರತಿಯೊಂದು ಜಿಲ್ಲೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಖುದ್ದಾಗಿ ಭೇಟಿ ನೀಡಿ ಸಂತ್ರಸ್ತರಿಗೆ ಹೆಚ್ಚಿನ ರೀತಿಯಲ್ಲಿ ತುರ್ತಾಗಿ ಪರಿಹಾರ ನೀಡುತ್ತಾ ಬಂದಿರುವುದು ಇದೇ ಮೊದಲ ಬಾರಿಯಾಗಿದೆ. ಅವರ ಕಾರ್ಯ ವೈಖರಿ ಶ್ಲಾಘನೀಯವೆಂದರು.
ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, ಇತರ ತಾಲೂಕುಗಳಿಗೆ ತುಲನೆ ಮಾಡಿದಾಗ ಕಾರ್ಕಳ ತಾಲೂಕಿನಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ದೊಡ್ಡ ಪ್ರಮಾಣದಲ್ಲಿ ನಷ್ಟ ಸಂಭವಿಸಿಲ್ಲ. ಪ್ರಾಕೃತಿಕ ಹಿಡಿತವನ್ನು ಮಾನವನಿಂದ ತಡೆಗಟ್ಟಲು ಸಾಧ್ಯವಿಲ್ಲ. ಋಷಿ, ರಾಜ ಪರಂಪರೆಯಲ್ಲೂ ಪಾಕೃತಿಕ ಆರಾಧನೆಗಳು ನಡೆಯುತ್ತಿತ್ತು. ಪ್ರಸಕ್ತ ಕಾಲಘಟ್ಟದಲ್ಲಿ ಪ್ರಾಕೃತಿಕ ಉಳಿವಿಗಾಗಿ ಶ್ರಮಿಸಬೇಕೆಂದರು.
ಪ್ರಾಕೃತಿಕ ವಿಕೋಪದಲ್ಲಿ ಸಂಭವಿಸಿರುವುದರಿಂದ ಈ ಕಾರ್ಯಕ್ರಮವನ್ನು ಸರಳವಾಗಿ ನಡೆಯಿತು. ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ, ಉಡುಪಿ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್.ಕೋಟ್ಯಾನ್ ಸಾಂದರ್ಭಿಕವಾಗಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಜ್ಯೋತಿ ಪೂಜಾರಿ, ರೇಷ್ಮಾ ಶೆಟ್ಟಿ, ದಿವ್ಯಶ್ರೀ ಅಮೀನ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ಗೋಪಾಲ ಮೂಲ್ಯ, ತಾಲೂಕು ಪಂಚಾಯತ್ ಸದಸ್ಯ ಹರೀಶ್ ನಾಯಕ್, ಎಪಿಎಂಸಿ ಅಧ್ಯಕ್ಷ ಮಾಪಾಲು ಜಯವರ್ಮ ಜೈನ್, ಕುಕ್ಕುಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ರಾವ್ ಮೊದಲಾದವರು ವೇದಿಕೆ ಉಪಸ್ಥಿತರಿದ್ದರು.