ಸುಳ್ಯ, ಆ.14(Daijiworld News/SS): ಪ್ರವಾಹ ಸಂತ್ರಸ್ತರಿಗೆ 1 ಕೋಟಿ ರೂ. ಪರಿಹಾರ ನೀಡಲು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮುಂದಾಗಿದೆ.
ಪ್ರವಾಹ ಸಂತ್ರಸ್ತರ ನೆರವಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಧಾವಿಸಿದ್ದು, ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ನೀಡಲು ಮುಂದಾಗಿದೆ. ದೇವಾಲಯದ ವ್ಯವಸ್ಥಾಪನಾ ಮಂಡಳಿಯಿಂದ ನಿರ್ಣಯ ಅಂಗೀಕಾರವಾಗಿದ್ದು, ಜಿಲ್ಲಾಧಿಕಾರಿಗಳಿಗೆ ನಿರ್ಣಯ ಕಳುಹಿಸಿಕೊಟ್ಟಿದೆ. ದೇವಸ್ಥಾನದಲ್ಲಿರುವ ಪಂಚೆ, ಸೀರೆಗಳನ್ನು ಬೆಳ್ತಂಗಡಿ, ಬಂಟ್ವಾಳ ಹಾಗೂ ಮಡಿಕೇರಿಯ ಸಂತ್ರಸ್ತರಿಗೆ ನೀಡಲು ತೀರ್ಮಾನಿಸಿದೆ.
ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯಲ್ಲಿ ಪ್ರವಾಹ ಮುಂದುವರೆದಿದೆ. ಇತ್ತ ಮಲೆನಾಡಿನಲ್ಲೂ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದ್ದು, ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಹೆಚ್ಚಿದೆ. ಕೊಡಗು ಜಿಲ್ಲೆ ಈ ವರ್ಷವೂ ಪ್ರವಾಹದ ಹೊಡೆತಕ್ಕೆ ಸಿಲುಕಿದೆ. ಸೇನಾಪಡೆ, ನೌಕಾಪಡೆ, ವಾಯುಪಡೆಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.