ಮಂಗಳೂರು, ಆ 13 (Daijiworld News/MSP): ಮೂರು ವಾರಗಳ ಹಿಂದೆ ಹಜ್ ಯಾತ್ರೆಗೆ ತೆರಳಿದ್ದ ಬೈಕಂಪಾಡಿಯ ನಿವಾಸಿಯೊಬ್ಬರು ಮೆಕ್ಕಾದಲ್ಲೇ ಕೊನೆಯುಸಿರೆಳೆದ ಘಟನೆ ಆ.13ರ ಮಂಗಳವಾರ ನಡೆದಿದೆ.
ಬೈಕಂಪಾಡಿ ಸಮೀಪದ ಶೇಡಿಗುರಿ ನಿವಾಸಿ ಮಹಮ್ಮದ್ ಬಾವಾ ಎಂ ಆರ್ (70 ವರ್ಷ) ಮೃತ ವ್ಯಕ್ತಿ. ಮೂರು ವಾರಗಳ ಹಿಂದೆಯಷ್ಟೇ ಹಜ್ ಯಾತ್ರೆಗೆ ತೆರಳಿದ್ದ ಅವರು, ಹಜ್ ಯಾತ್ರೆಯ ಭಾಗವಾದ ಸೈತಾನನಿಗೆ ಕಲ್ಲೆಸೆಯುವ ವಿಧಿಯ ಬಳಿಕ, ಸೋಮವಾರ ತೀವ್ರ ಅಸ್ವಸ್ಥರಾಗಿದ್ದರು.
ಆ ಬಳಿಕ ಅವರನ್ನು ಮಕ್ಕಾ ಕಿಂಗ್ ಫಹದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಧ್ಯಾಹ್ನ 3.30 ಗಂಟೆಗೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ. ಮಹಮ್ಮದ್ ಬಾವಾ ಎಂ ಆರ್ ಅವರ ಅಂತ್ಯಕ್ರಿಯೆ ಮಕ್ಕಾದಲ್ಲಿಯೇ ನಡೆಯಲಿದೆ.