ಮಂಗಳೂರು, ಆ.13(Daijiworld News/SS): ಕರಾವಳಿ ಸೇರಿದಂತೆ ರಾಜ್ಯದ ಜನ ಅತೀವೃಷ್ಠಿಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಜನತೆ ಅವರ ನೆರವಿಗೆ ಸ್ಪಂದಿಸಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮನವಿ ಮಾಡಿದ್ದಾರೆ.
ವಿಪರೀತ ಮಳೆ ಮತ್ತು ನೆರೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯದ ಬಹುಭಾಗ ಜಲಾವೃತವಾಗಿರುವುದರಿಂದ ಲಕ್ಷಾಂತರ ಜನರು ನಿತ್ಯಸಂಕಟವನ್ನು ಅನುಭವಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಲು ಶಾಸಕ ವೇದವ್ಯಾಸ ಕಾಮತ್ ಹಾಗೂ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ನೆರೆ ಸಂತ್ರಸ್ತರಿಗೆ ಮಾನವೀಯ ನೆಲೆಯಲ್ಲಿ ಸಹಾಯಹಸ್ತ ನೀಡಲು ವಿನಂತಿಸಿಕೊಂಡಿರುವ ಶಾಸಕ ವೇದವ್ಯಾಸ ಕಾಮತ್, ವಸ್ತು ರೂಪದಲ್ಲಿ ಹಾಸಿಗೆ (ಚಾಪೆ/ ಪ್ಲಾಸ್ಟಿಕ್ ಶೀಟ್), ಹೊದಿಕೆ (ರಗ್), ಸ್ತ್ರೀ/ಪುರುಷ/ಮಕ್ಕಳ ಒಳಉಡುಪು, ಸ್ಯಾನಿಟರಿ ಪ್ಯಾಡ್, ಪ್ಲಾಸ್ಟಿಕ್ ಟರ್ಪಾಲಿನ್, ಟವೆಲ್, ಸೀರೆ, ಪ್ಯಾಂಟ್ ಮತ್ತು ಶರ್ಟ್, ಮಕ್ಕಳ ಉಡುಪು, ಬೆಚ್ಚಗಿನ ಉಡುಪು, ಆಹಾರ ಪದಾರ್ಥಗಳು ಮತ್ತು ಕುಡಿಯುವ ನೀರು ಕೊಡಬಹುದಾಗಿದೆ. ವಸ್ತುಗಳನ್ನು ದಾನವಾಗಿ ನೀಡಲು ಇಚ್ಛಿಸುವವರು ಮಂಗಳೂರಿನ ಕೊಡಿಯಾಲ್ ಬೈಲ್'ನಲ್ಲಿರುವ ಕಲಾಕುಂಜ ಹಾಲ್ ರಸ್ತೆಯಲ್ಲಿರುವ ಅಟಲ್ ಸೇವಾ ಕೇಂದ್ರದಲ್ಲಿ ತಂದು ನೀಡಬಹುದು ಎಂದು ತಿಳಿಸಿದ್ದಾರೆ.
ಒಂದು ವೇಳೆ ನೆರೆ ಸಂತ್ರಸ್ತರಿಗೆ ಹಣವನ್ನು ನೀಡುವುದಾಗಿದ್ದರೆ ಮುಖ್ಯಮಂತ್ರಿ ಪರಿಹಾರ ನಿಧಿಯ ಹೆಸರಿನಲ್ಲಿ ಚೆಕ್ ನೀಡಬಹುದು. ಅದನ್ನು ಕೂಡ ಸ್ವೀಕರಿಸಲಾಗುವುದು. ವಸ್ತು ರೂಪದಲ್ಲಿ ನೀವು ನೀಡುವ ಸಹಾಯ ಅಥವಾ ಚೆಕ್ ರೂಪದಲ್ಲಿ ನೀಡುವ ಆರ್ಥಿಕ ಸಹಾಯವನ್ನು ಗೌರವಪೂರ್ವಕವಾಗಿ ಸ್ವೀಕರಿಸಿ ರಸೀದಿಯನ್ನು ನೀಡಲಾಗುವುದು. ನಿಮ್ಮ ಎಲ್ಲಾ ಸಹಾಯ ಯೋಗ್ಯವಾಗಿ ಸಂತ್ರಸ್ತರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ವಿನಂತಿಸಿದ್ದಾರೆ.
ಈಗಾಗಲೇ ಈ ಕಾರ್ಯಕ್ಕೆ ಆಲ್ ಟೆಂಪಲ್ ಎಸೋಸಿಯೇಶನ್ ವತಿಯಿಂದ ಒಂದು ಲಾರಿ ಅಕ್ಕಿಯನ್ನು ನೀಡಲಾಗುವುದು ಎಂದು ಎಸೋಸಿಯೇಶನ್ ಅಧ್ಯಕ್ಷ ಸಿಎ ಜಗನ್ನಾಥ ಕಾಮತ್ ಹೇಳಿದ್ದಾರೆ. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 50 ಸಾವಿರ, ವಿವೇಕ್ ಟ್ರೇಡರ್ಸ್'ನ ಆಯುರ್ ವಿವೇಕ್ ವತಿಯಿಂದ ಸಂಸ್ಥೆಯ ಮಾಲೀಕ ಮಂಗಲ್ಪಾಡಿ ನರೇಶ್ ಶೆಣೈಯವರು 50 ಸಾವಿರ ಮೌಲ್ಯದ ವಸ್ತುಗಳನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ನಾಗರಿಕರು ನೆರೆ ಸಂತ್ರಸ್ತರ ಪರಿಹಾರ ಕಾರ್ಯದಲ್ಲಿ ಕೈ ಜೋಡಿಸಬೇಕಾಗಿ ಸಹೃದಯಿಗಳಲ್ಲಿ ಕಳಕಳಿಯ ವಿನಂತಿ ಮಾಡಿರುವ ಶಾಸಕ ಕಾಮತ್, ಕಚೇರಿ ಸಹಾಯಕ ಸತೀಶ್ (ದೂರವಾಣಿ ಸಂಖ್ಯೆ- 9945263233) ಅವರನ್ನು ಈ ವಿಷಯದಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.