ಮಂಗಳೂರು, ಆ.13(Daijiworld News/SS): ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಅವಾಂತರ ಸೃಷ್ಟಿಸಿದ್ದ ಮಳೆ ಸದ್ಯ ಕಡಿಮೆಯಾಗಿದೆ. ಇಂದು ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕರಾವಳಿಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯ ತೀವ್ರತೆ ಇಳಿಮುಖವಾಗಿದೆ. ಆ.12ರಂದು ದ.ಕ. ಜಿಲ್ಲೆಯ ಹಲವೆಡೆ ಸಾಧಾರಣ ಮಳೆಯಾಗಿದೆ. ರಾತ್ರಿ ವೇಳೆ ಭಾರೀ ಮಳೆ ಸುರಿದಿದೆ. ನಗರದ ಹೊರವಲಯದ ಮೂಡುಬಿದಿರೆಯಲ್ಲಿ ಹಗಲಿನಲ್ಲಿ ವಿರಳ ಮಳೆಯಾಗಿದ್ದು, ಸಂಜೆ ಸಾಧಾರಣ ಮಳೆ ಸುರಿದಿದೆ. ಬಂಟ್ವಾಳ, ಬೆಳ್ತಂಗಡಿಯಲ್ಲಿ ಕಡಿಮೆ ಮಳೆಯಾಗಿದ್ದು, ಪುತ್ತೂರಿನಲ್ಲಿ ರಾತ್ರಿ ಗಾಳಿ ಸಹಿತ ಭಾರೀ ಮಳೆಯಾಗಿದೆ. ವೇಣೂರಿನಲ್ಲಿ ಸಂಜೆ ಉತ್ತಮ ಮಳೆಯಾದರೆ, ಸುರತ್ಕಲ್, ಕಿನ್ನಿಗೋಳಿಯಲ್ಲಿ ಸ್ವಲ್ಪ ಮಳೆಯಾಗಿದೆ.
ಜಿಲ್ಲೆಯ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಬಂಟ್ವಾಳ ಹಾಗೂ ಉಪ್ಪಿನಂಗಡಿಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರ ನದಿ ನೀರಿನ ಮಟ್ಟದಲ್ಲಿ ಇಳಿಕೆಯಾಗಿದೆ. ಫಲ್ಗುಣಿ, ಶಾಂಭವಿ ಹಾಗೂ ನಂದಿನ ನದಿ ನೀರಿನ ಮಟ್ಟ ಕೂಡ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.
ಉಡುಪಿ ಜಿಲ್ಲೆಯ ಬೆಳ್ಮಣ್, ಶಿರ್ವ, ಕಾಪು, ಪಡುಬಿದ್ರಿ, ಬ್ರಹ್ಮಾವರ, ಕೋಟೇಶ್ವರ, ಕೊಲ್ಲೂರು, ಕುಂದಾಪುರ ಭಾಗಗಳಲ್ಲಿ ಉತ್ತಮ ಮಳೆ ಸುರಿದಿದೆ.