ಬೆಳ್ತಂಗಡಿ, ಆ 12 (Daijiworld News/SM): ಎರಡು ಜಿಲ್ಲೆಗಳನ್ನು ಸಂಪರ್ಕಿಸುವ ಚಿಕ್ಕಮಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಚಾರ್ಮಾಡಿ ಘಾಟಿ ರಸ್ತೆ ಬಹುತೇಕ ಕುಸಿದಿದೆ. ಈ ರಸ್ತೆ ಮತ್ತೆ ಎಂದಿನಂತಾಗಬೇಕಾದರೆ ಮೂರು ನಾಲ್ಕು ತಿಂಗಳೇ ಬೇಕು ಎನ್ನಲಾಗಿದೆ.
ಕಳೆದ ಬಾರಿಯ ಮಳೆಗಾಲದ ಸಮಯದಲ್ಲೇ ಚಾರ್ಮಾಡಿ ಘಾಟ್ ನ ಹಲವು ಭಾಗಗಳಲ್ಲಿ ಕುಸಿತಗೊಂಡು ಸಂಚಾರ ಬಂದ್ ಆಗಿತ್ತು. ಆದರೆ ಈ ಬಾರಿ ಅದನ್ನು ಮೀರಿಸಿದ್ದು, ರಸ್ತೆಗಳೇ ಕುಸಿದು ಹೋಗಿವೆ. ಇವುಗಳನ್ನು ದುರಸ್ಥಿ ಪಡಿಸಲು ಒಂದಿಷ್ಟು ಸಮಯ ಅಗತ್ಯವಿದೆ. ಪರಿಣಾಮ ಮೂರು ನಾಲ್ಕು ತಿಂಗಳುಗಳ ಕಾಲ ಸಂಚಾರ ಬಂದ್ ಆಗಲಿದೆ.
ಚಾರ್ಮಾಡಿ ಘಾಟ್ನಲ್ಲಿ 11 ಹೇರ್ ಪಿನ್ ತಿರುವುಗಳಿದ್ದು, 3ನೇ ತಿರುವಿನಿಂದ 11 ತಿರುವಿನ ವರೆಗೂ ಹಾನಿಯಾಗಿದೆ. 7 ಕಡೆಗಳಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿದಿದ್ದು, 3 ಕಡೆಗಳಲ್ಲಿ ಬೃಹತ್ ಕಲ್ಲು, ಮಣ್ಣು ರಸ್ತೆಗುರುಳಿ ರಸ್ತೆ ಸಂಪರ್ಕವೇ ಕಡಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಮಣ್ಣು, ಕಲ್ಲು ತೆರವು ಕಾರ್ಯ ನಿರಂತರವಾಗಿ ನಡೆಯುತ್ತಿದೆ.
ಇನ್ನು 4 ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯೇ ಕುಸಿದು ಬೃಹತ್ ಕಂದಕ ನಿರ್ಮಾಣಗೊಂಡಿದೆ. ಪಶ್ಚಿಮ ಘಟದ ಗುಡ್ಡಗಾಡು ಪ್ರದೇಶಗಳಲ್ಲಿ ಚಾರ್ಮಾಡಿ ಘಾಟ್ ಅರಣ್ಯ ವ್ಯಾಪ್ತಿಯಲ್ಲಿ ಕಳೆದ 6 ದಿನಗಳಿಂದ ಬೆಟ್ಟದ ಬೆನ್ನಿನ ಭಾಗದಲ್ಲಿ ಹಲವೆಡೆ ಬಂಡೆ, ಮಣ್ಣು ಜಾರಿದ ಸ್ಥಿತಿಯಲ್ಲಿದ್ದು, ಶನಿವಾರ ರಾತ್ರಿಯಿಂದ ಘಾಟ್ ಕುಸಿಯಲು ಆರಂಭಗೊಂಡಿತ್ತು. ಚಾರ್ಮಾಡಿ ಘಾಟ್ ಪ್ರದೇಶದ ಏರಿಕಲ್ಲು, ಕೊಡೆಕಲ್ಲು, ಮಿಂಚುಕಲ್ಲು, ಬಾರೆಕಲ್ಲು ಬೆಟ್ಟಗಳು ಬೃಹತ್ ಬಂಡೆಗಳೊಂದಿಗೆ ಕುಸಿದಿದ್ದು, ಘಾಟ್ ಪ್ರದೇಶದಲ್ಲಿ ಬೃಹತ್ ಕಂದಕಗಳು ನಿರ್ಮಾಣಗೊಂಡಿದೆ.