ಬೆಳ್ತಂಗಡಿ: ಆ 12 (Daijiworld News/SM): ಮಲವಂತಿಗೆ ಗ್ರಾಮದ ಬೆಟ್ಟ ಪ್ರದೇಶದಲ್ಲಿ ಅಲ್ಲಲ್ಲಿ ಭಾರೀ ಭೂ ಕುಸಿತಗಳು ಸಂಭವಿಸಿದ್ದು, ಸುಮಾರು 10 ಕುಟುಂಬಗಳ 10ಕ್ಕೂ ಅಧಿಕ ಕೃಷಿ ಭೂಮಿ ಸಂಪೂರ್ಣ ನಾಶಗೊಂಡಿದೆ. ಅಲ್ಲದೆ ಸುಮಾರು 4 ಕಿ.ಮೀ. ಉದ್ದಕ್ಕೆ ಹೊಸ ನದಿಯೊಂದು ಸೃಷ್ಟಿಯಾಗಿದೆ.
ನೇರೆ ಪೀಡಿತ ಪ್ರದೇಶದಲ್ಲಿ ಸಂತ್ರಸ್ತರಾದ ಇಲ್ಲಿನ ಕೆಲ ಕುಟುಂಬಗಳು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಕೆಲವರು ಪ್ರಾಣ ಕೈಯಲ್ಲಿ ಹಿಡಿದು ಅಲ್ಲಿಯೇ ವಾಸಿಸುತ್ತಿದ್ದಾರೆ. ಈಗ ಸೃಷ್ಟಿಯಾಗಿರುವ ನದಿಯಲ್ಲಿ ಹಾಗೂ ಇತರೆಡೆ ನೀರು ಹರಿಯುತ್ತಿದ್ದು ಭೂ ಕುಸಿತದ ಭೀತಿ ಮುಂದುವರೆದಿದೆ.
ಮಲವಂತಿಗೆ ಗ್ರಾಮದ ಸಿಂಗನಾರು ಪ್ರದೇಶದ ನಿವಾಸಿ ಗುಲಾಬಿ ಎಂಬುವರ ಮನೆಯ ಅಂಗಳದಲ್ಲಿಯೇ ಹೊಸ ನದಿ ಸೃಷ್ಟಿಯಾಗಿದ್ದು ಅದು ಅವರ ಸುಮಾರು 1 ಎಕರೆ ಅಡಕೆ ತೋಟವನ್ನು ಕೊಚ್ಚಿಕೊಂಡು ಹೋಗಿದೆ. ಅಲ್ಲದೆ ಮನೆಗೂ ಹಾನಿ ಸಂಭವಿಸಿದೆ. ರುಕ್ಮಯ್ಯ ಮಲೆಕುಡಿಯ ಎಂಬುವರ ೨ ಎಕರೆ ತೋಟ ಮತ್ತು 1 ಎಕರೆ ಗದ್ದೆ ಸಂಪೂರ್ಣ ಕಲ್ಲು ಬಂಡೆಗಳಿಂದ ತುಂಬಿಹೋಗಿದೆ. ಇದೇ ರೀತಿ ಸುರೇಶ ಎಂಬುವರ 1 ಎಕರೆ ಅಡಕೆ ತೋಟ ನೆಲಸಮವಾಗಿದೆ.
ಈ ಪ್ರದೇಶದ ಸಮೀಪ ನಂದಿಕಾಡು ಎಂಬಲ್ಲಿನ ನಿವಾಸಿ ರುಕ್ಮಣಿ ಎಂಬುವರ ಮನೆಯ ಹಿಂಭಾಗದಲ್ಲಿ ಭಾರೀ ಗುಡ್ಡ ಕುಸಿದು ಬಿದ್ದಿದ್ದು ಮನೆಯ ಮೇಲ್ಛಾವಣಿಯ ತನಕ ಮಣ್ಣು ತುಂಬಿದ್ದು ಗೋಡೆ ಕುಸಿತವಾಗುವ ಸ್ಥಿತಿಯಲ್ಲಿದೆ. ಇವರ ಅನಾರೋಗ್ಯ ಪೀಡಿತ ಮಗನನ್ನು ಬೆಡ್ಶೀಟಿನಲ್ಲಿ ಸುತ್ತಿ ಹೊತ್ತುಕೊಂಡು ಸುಮಾರು 5 ಕಿ.ಮೀ ದೂರದಲ್ಲಿರುವ ಸಂಬಂಧಿಕರ ಮನೆಯಲ್ಲಿ ಬಿಡಲಾಗಿದೆ.
ಸನಿಹದ ಪುಟ್ಟಮ್ಮ ಎಂಬುವವರ ಕೃಷಿ ನಾಶಗೊಂಡಿದ್ದರೆ, ಚನನ ಮಲೆಕುಡಿಯ ಎಂಬುವವರ ಮನೆಯ ಅಂಗಳದಲ್ಲೇ ಹೊಸ ತೊರೆಯೊಂದು ನಿರ್ಮಾಣವಾಗಿ ತೋಟವನ್ನು ಸಂಪೂರ್ಣಕೊಚ್ಚಿ ಕೊಂಡು ಹೋಗಿದೆ. ಬಾಬಿ ಹೆಂಗ್ಸು ಎಂಬುವರ ತೋಟ ಗುಡ್ಡ ಕುಸಿತವಾಗಿ ನಷ್ಟ ಉಂಟಾಗಿದೆ.