ವಿಟ್ಲ, ಆ 12 (Daijiworld News/SM): ಪತಿ, ಹಾಗೂ ಮಕ್ಕಳಿಂದ ದೂರವಾಗಿದ್ದ ಅನಾಥ ಮಹಿಳೆಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದು, ಆಕೆಯ ಮೃತದೇಹವನ್ನು ಪಡೆಯಲು ವಾರೀಸುದಾರರು ವಿಟ್ಲ ಪೊಲೀಸ್ ಠಾಣೆಗೆ ಬರುವಂತೆ ಪೊಲೀಸರು ವಿನಂತಿಸಿದ್ದಾರೆ.
ಮೂಲತಃ ಬಳ್ಳಾರಿಯವರಾಗಿದ್ದು, ಪ್ರಸ್ತುತ ವಿಟ್ಲ ಸಮೀಪದ ಇಡ್ಕಿದು ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ, ಈರಣ್ಣ ಗೌಡ ಅವರ ಪತ್ನಿ ಪಾರ್ವತ್ತಮ್ಮ ಯಾನೆ ಪದ್ಮಾವತಿ ಎಂಬವರು ಮೃತಪಟ್ಟವರು.
ಈಕೆಯ ಪತಿ ಈರಣ್ಣ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ವರ್ಷಗಳ ಹಿಂದೆ ಪತಿ ಆಕೆಯನ್ನು ಮೂವರು ಗಂಡು ಮಕ್ಕಳ ಸಹಿತ ಬಳ್ಳಾರಿಯಲ್ಲಿ ಕೈ ಬಿಟ್ಟಿದ್ದರು. 1989ರಲ್ಲಿ ಮೂವರು ಗಂಡು ಮಕ್ಕಳು ಕೂಡ ಅವರಿಂದ ದೂರವಾಗಿದ್ದರು. ಬಳಿಕ ಅವರು ಹೊಟ್ಟೆಪಾಡಿಗಾಗಿ ಅಲೆದಾಡುತ್ತ ವಿಟ್ಲ ಕಡೆ ಬಂದು ಇಡ್ಕಿದು ಗ್ರಾಮದ ಕೋಲ್ಪೆ ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು.
ಅವರ ಬಳಿಯಿರುವ ಆಧಾರ್ ಕಾರ್ಡ್ ನಲ್ಲಿ ಅವರ ವಿಳಾಸ ಹಾಸನ ಜಿಲ್ಲೆ ಎಂದು ನಮೂದಿಸಲಾಗಿದೆ. ಅನಾರೋಗ್ಯದಿಂದ ಇವರು ಮೃತಪಟ್ಟಿದ್ದು, ಇವರ ಮೃತದೇಹವನ್ನು ಸಂಬಂಧಿಕರಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಸದ್ಯ ಮೃತದೇಹವನ್ನು ವಿಟ್ಲ ಶವಗಾರದಲ್ಲಿ ಇರಿಸಲಾಗಿದೆ. ಅವರ ಸಂಬಂಧಿಕರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದರೆ ವಿಟ್ಲ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ವಿನಂತಿಸಿದ್ದಾರೆ.