ಬೆಳ್ತಂಗಡಿ,ಆ.12(Daijiworld News/RD): ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ನಿಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಕೃತಿಕ ವಿಕೋಪ ಪರಿಶೀಲನಾ ಸಭೆ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಬೋಳುರು,ಹೊಯಿಗೆಬಜಾರ್,ಕಣ್ಣೂರು, ಜೆಪ್ಪು ಕುಡ್ಪಾಡಿ, ಜೆಪ್ಪು, ಕುದ್ರೋಳಿ, ಬೋಳಾರ, ಜೆಪ್ಪಿನಮೊಗರು, ಬೊಕ್ಕಪಟ್ಣ, ಮಂಗಳಾದೇವಿ ಸಹಿತ ಕೆಲವು ಪ್ರದೇಶಗಳು ನದಿಭಾಗದ ಹತ್ತಿರದಲ್ಲಿ ಇವೆ. ಅದರಿಂದ ಮಳೆಗಾಲದಲ್ಲಿ ಪ್ರತಿ ಬಾರಿ ನದಿ ಉಕ್ಕಿ ಹರಿದು ಅರ್ಧ ಕಿಲೋ ಮೀಟರ್ ನಷ್ಟು ಒಳಗೆ ನೀರು ಬರುತ್ತದೆ. ಇದರಿಂದ ಮಳೆಗಾಲದಲ್ಲಿ ಆ ಭಾಗದ ಜನ ಮನೆಯನ್ನು ಬಿಟ್ಟು ಬೇರೆ ಕಡೆ ಹೋಗಬೇಕಾಗುತ್ತದೆ. ಈ ಬಾರಿ ಇಂತಹ ಜನ ಗಂಜಿ ಕೇಂದ್ರಕ್ಕೆ ಶೀಪ್ಟ್ ಆಗಿದ್ದಾರೆ. ಈ ಬಾರಿ ಮಳೆ ಹೆಚ್ಚಿದ್ದ ಜನ ಕಾರಣ ಇನ್ನಷ್ಟು ತೊಂದರೆಯಾಗಿತ್ತು. ಆದರಿಂದ ಈ ಭಾಗದಲ್ಲಿ ಗೋಡೆಯಂತಹ ವ್ಯವಸ್ಥೆ ಮಾಡಿ ಜನರ ತೊಂದರೆಗೆ ಪರಿಹಾರ ನೀಡಬೇಕಿದೆ.
ಈ ಬಾರಿ ಮಂಗಳೂರಿನಲ್ಲಿ ಡೆಂಗ್ಯೂ ಕಾಯಿಲೆ ಕೂಡ ಜಾಸ್ತಿ ಇತ್ತು. ಬಿಟಿವಿಯ ಕ್ಯಾಮೆರಾಮೆನ್ ನಾಗೇಶ್ ಪಡು ಅವರು ಡೆಂಗ್ಯೂ ಕಾಯಿಲೆಯಿಂದ ಮೃತಪಟ್ಟಿರುವುದಕ್ಕೆ ತಾವು ಐದು ಲಕ್ಷ ಪರಿಹಾರ ಘೋಷಣೆ ಮಾಡಿರುವಂತೆ ಇನ್ನು ಏಳೆಂಟು ಜನ ಈ ಕಾಯಿಲೆಯಿಂದ ಮೃತಪಟ್ಟಿದ್ದು ಅವರಿಗೂ ಪರಿಹಾರ ಧನ ಘೋಷಣೆ ಮಾಡಬೇಕಾಗಿ ಶಾಸಕ ಕಾಮತ್ ಅವರು ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದ ಸಭೆಯಲ್ಲಿ ಮನವಿ ಮಾಡಿದರು.