ಪುತ್ತೂರು, ಆ 12 (Daijiworld News/MSP): ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಪುತ್ತೂರು ಸಮೀಪದ ತೆಂಕಿಲ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯೋಂದಕ್ಕೆ ಗುಡ್ಡ ಜರಿದು ಬಿದ್ದಿದ್ದು, ಮನೆಯ ಸಮೀಪದ ಗುಡ್ಡದಲ್ಲಿ ಸುಮಾರು 200 ಮೀಟರ್ನಷ್ಟು ಉದ್ದವಾಗಿ ಬಿರುಕು ಕಾಣಿಸಿಕೊಂಡಿದ್ದು, ಮಡಿಕೇರಿಯ ದುರ್ಘಟನೆ ಇಲ್ಲಿ ಮರುಕಳಿಸುವ ಭೀತಿಯನ್ನು ಸೃಷ್ಠಿಸಿದೆ.
ತೆಂಕಿಲ ಗುಡ್ಡದಲ್ಲಿ ಕಾಣಿಸಿಕೊಂಡಿರುವ ಬಿರುಕಿನ ಸ್ಥಳಕ್ಕೆ ಇಂದು ಭೂವಿಜ್ಞಾನ ಇಲಾಖೆಯ ಅದಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೂಮಿ ನೀರನ್ನು ಹೀರಿಕೊಂಡು, ನೀರಿನ ಹರಿಯುವಿಕೆ ಕಡಿಮೆಯಾದಾಗ ಗುಡ್ಡ ಜರಿಯುವಂತಹ ಘಟನೆ ನಡೆಯುತ್ತವೆ. ಇಲ್ಲಿಯೂ ಗುಡ್ಡ ಜರಿದು ನೀರಿನ ಒತ್ತಡ ಕಡಿಮೆಯಾದ ಕಾರಣ ಬಿರುಕು ಬಿಟ್ಟು ನಿಂತಿರುವುದರಿಂದ ಸಂಬಾವ್ಯ ಅಪಾಯವಿದೆ, ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ.
ಈ ಭಾಗದಲ್ಲಿ ಗುಡ್ಡ ಬಿರುಕು ಬಿಟ್ಟ ಸ್ಥಳದಿಂದ ಕೆಳಭಾಗದಲ್ಲಿ ನೂರಾರು ಮನೆಗಳಿದ್ದು ಅಲ್ಲಿನ ನಿವಾಸಿಗಳು ಅತಂಕದಿಂದ ಬದುಕುವಂತಾಗಿದೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು 25 ಕ್ಕೂ ಹೆಚ್ಚು ಮನೆಗಳ ನಿವಾಸಿಗಳನ್ನು ಸ್ಥಳಾಂತರಗೊಳ್ಳುವಂತೆ ಸೂಚಿಸಿದ್ದಾರೆ.