ಮಂಗಳೂರು ಡಿ 20 : ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರಾವಳಿ ಉತ್ಸವವು ಈ ಬಾರಿ ಡಿಸೆಂಬರ್ 22 ರಿಂದ ಮೊದಲ್ಗೊಂಡು 21 ರವರೆಗೆ ನಡೆಸಲು ಜಿಲ್ಲಾ ಕರಾವಳಿ ಉತ್ಸವ ಸಮಿತಿ ನಿರ್ಧರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹೇಳಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರಾವಳಿ ಉತ್ಸವ ಮೈದಾನ, ಕದ್ರಿ ಉದ್ಯಾನವನ, ಪಣಂಬೂರು ಕಡಲ ತೀರದಲ್ಲಿ ಈ ಬಾರಿಯೂ ಈ ಉತ್ಸವ ಆಯೋಜನೆ ಮಾಡಲಾಗಿದೆ ಎಂದು ಹೇಳಿದ ಅವರು ಡಿಸೆಂಬರ್ 22ರಂದು ಶುಕ್ರವಾರ ಸಂಜೆ 3.30 ಕ್ಕೆ ನೆಹರೂ ಮೈದಾನದಿಂದ ಕರಾವಳಿ ಉತ್ಸವ ಮೈದಾನದವರೆಗೆ ಅದ್ದೂರಿ ಮೆರವಣಿಗೆ ನಡೆಯಲಿದೆ. ಮೆರವಣಿಗೆಯನ್ನು ಸಚಿವ ಯು ಟಿ ಖಾದರ್ ಉದ್ಘಾಟಿಸಲಿದ್ದಾರೆ. ಇನ್ನು ಕರಾವಳಿ ಉತ್ಸವವನ್ನು ನಟ ಪ್ರಕಾಶ್ ರೈ ಉದ್ಘಾಟಿಸಲಿದ್ದಾರೆ ಎಂದರು. ಉತ್ಸವದ ಅಂಗವಾಗಿ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.