ಕುಂದಾಪುರ, ಆ.12(Daijiworld News/RD): ಗಂಗೊಳ್ಳಿಯ ಮುಸ್ಲಿಂ ಭಾಂಧವರು ತ್ಯಾಗ ಬಲಿದಾನದ ಸಂಕೇತದ ಹಬ್ಬವಾದ ಈದ್ ಉಲ್ ಅಝ ವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಹೊಚ್ಚ ಹೊಸ ಧಿರುಸುಗಳನ್ನು ಧರಿಸುವ ಮೂಲಕ ನಮಾಜ್ ನ್ನು ನೆರವೇರಿಸಿದರು.
ಕೇಂದ್ರ ಜುಮ್ಮಾ ಮಸೀದಿಯಲ್ಲಿ ಮೌಲಾನಾ ಮುಝಮ್ಮಿಲ್ ನದ್ವಿ, ಮೋಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಮೌಲಾನಾ ಅಬ್ದುಲ್ ವಹಾಬ್ ಸಾಹಬ್ ನದ್ವಿ, ಶಾಹಿ ಜುಮ್ಮಾ ಮಸೀದಿಯಲ್ಲಿ ಮೌಲಾನಾ ಅಬ್ದುಲ್ ಮತೀನ್ ಸಿದ್ದಿಕಿ ಹಾಗೂ ಸಲಫಿ ಮಸೀದಿಯಲ್ಲಿ ಮೌಲಾನಾ ತೌಫಿಕ್ ಉಮರಿ ಇವರು ಈದ್ ಖುದುಬ ಹಾಗೂ ನಮಾಜ್ ನೆರವೇರಿಸಿದರು. ಪರಸ್ಪರ ಆಲಿಂಗನಗೈದು ಈದ್ ಶುಭಾಶಯ ಹಂಚಿಕೊಂಡರು. ಅಗಲಿದವರ ಗೋರಿಗಳ ಬಳಿ ತೆರಳಿ ಪ್ರತ್ಯೇಕವಾಗಿ ವಿಶೇಷ ದುಆ ಮಾಡಲಾಯಿತು.
ಗುಂಪು ಹತ್ಯೆಯ ವಿರುದ್ಧ ಬ್ಯಾಡ್ಜ್ ಹಾಕಿ ನಮಾಜ್ ಮಾಡಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಗಂಗೊಳ್ಳಿಯ ಪಾಪ್ಯೂಲರ್ ಫ್ರಾಂಟ್ ಆಫ್ ಇಂಡಿಯಾದ ಸದಸ್ಯರು ನೆರೆ ಪೀಡಿತ ಪ್ರದೇಶದ ಸಂತ್ರಸ್ತರ ಪರಿಹಾರಕ್ಕಾಗಿ ಧನ ಸಹಾಯ ನೀಡುವಂತೆ ಕೋರಿದರು. ಎಸ್ಪಿ ನಿಶಾ ಜೇಮ್ಸ್ ಗಂಗೊಳ್ಳಿಗೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲಿಸಿದ್ದಾರೆ.