ಮಂಗಳೂರು,ಆ 12 (Daijiworld News/MSP): ದಕ್ಷಿಣ ಕನ್ನಡದಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಬಂಟ್ವಾಳ ಹಾಗೂ ಬೆಳ್ತಂಗಡಿಯ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಿದ್ದೇನೆ. ಮೊದಲು ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸುವ ಹಾಗೂ ಮನೆ ಮಠ ಕಳೆದುಕೊಂಡವರ ಪುನರ್ವಸತಿ ಕಡೆಗೆ ಪ್ರಮುಖ ಆದ್ಯತೆ ನೀಡಬೇಕು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಆ.16 ರ ಬಳಿಕ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಹಾಗೂ ಮಳೆ ಹಾನಿ ಪರಿಶೀಲನೆಗಾಗಿ ಆ.12 ರ ಸೋಮವಾರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಂದಿಳಿದ ಅವರು ಪತ್ರಕರ್ತರೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದರು. ಆ.16 ರಂದು ದೆಹಲಿಗೆ ತೆರಳಿ ಪಕ್ಷದ ವರಿಷ್ಟರೊಂದಿಗೆ ಚರ್ಚಿಸಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಈಗೇನಿದ್ದರೂ ಪ್ರವಾಹ ಪರಿಸ್ಥಿತಿ ಹೇಗೆ ನಿಯಂತ್ರಿಸಬೇಕು , ಜಿಲ್ಲೆಯಲ್ಲಿ ಐದು ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಪರಿಹಾರ ಕೇಂದ್ರದಲ್ಲಿ 370 ಜನ ಇನ್ನು ಇದ್ದಾರೆ. 432 ಮನೆಗಳು ಹಾನಿಯಾಗಿದೆ. 16 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂಬ ಮಾಹಿತಿ ದೊರಕಿದೆ.
ರಾಜ್ಯದಲ್ಲಿ ಅಂದಾಜು ಪ್ರಕಾರ 40 ಸಾವಿರ ಕೋಟಿ ನಷ್ಟವಾಗಿದೆ. ತಕ್ಷಣಕ್ಕೆ ತಾತ್ಕಲಿಕವಾಗಿ ಪರಿಹಾರ ರೂಪವಾಗಿ ಮೂರು ಸಾವಿರ ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇನೆ ನೆರವಿನ ಭರವಸೆ ದೊರಕಿದೆ ಎಂದು ಹೇಳಿದರು.
ಆ ಬಳಿಕ ಸಿಎಂ ರಸ್ತೆ ಮಾರ್ಗವಾಗಿ ಬೆಳ್ತಂಗಡಿಗೆ ತೆರಳಲಿದ್ದಾರೆ. ಮಧ್ಯಾಹ್ನ 1 ರಿಂದ 2 ಗಂಟೆಯ ತನಕ ಬೆಳ್ತಂಗಡಿ ಸುತ್ತಮುತ್ತದ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ನಡೆಸಲಿದ್ದಾರೆ. ಮಧ್ಯಾಹ್ನ 2. 30ರಿಂದ ಧರ್ಮಸ್ಥಳದಲ್ಲಿ ನೆರೆ ಹಾವಳಿಯ ಪರಿಹಾರ ಕ್ರಮಗಳ ಕುರಿತಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಬಂಟ್ವಾಳಕ್ಕೆ ಆಗಮಿಸಿ ಅಲ್ಲಿಯೂ ನೆರೆ ಪೀಡಿದ ಪ್ರದೇಶಕ್ಕೆ ತೆರಳಿ ವೀಕ್ಷಣೆ ನಡೆಸಲಿದ್ದಾರೆ. ಸಂಜೆ 5. 15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಹಿಂತಿರುಗಿ ಮೈಸೂರಿಗೆ ತೆರಳಲಿದ್ದಾರೆ.