ಮಂಗಳೂರು, ಆ 12 (Daijiworld News/MSP): ಕಳೆದ 8 ದಿನಗಳಿಂದ ಸುರಿಯುತ್ತಿದ್ದ ಮಳೆಯ ಆರ್ಭಟ ತಗ್ಗಿದೆ, ರೌದ್ರಾವತಾರ ತಾಳಿದ್ದ ನೇತ್ರಾವತಿ , ಕುಮಾರಧಾರ ನದಿಗಳು ಶಾಂತವಾಗಿದೆ. ಭೂಕುಸಿತವೂ ಅಲ್ಪಮಟ್ಟಿಗೆ ಕಡಿಮೆಯಾಗಿದೆ. ಆದರೆ ಪ್ರವಾಹ , ಭೂಕುಸಿತ , ಮಳೆಯ ಆರ್ಭಟ ನಿಂತರೂ ಸಂತ್ರಸ್ತರ ಕಣ್ಣೀರಧಾರೆ ಮಾತ್ರ ನಿಲ್ಲುತ್ತಿಲ್ಲ.
ಹಳ್ಳ - ಕೊಳ್ಳಗಳು ಮೂರು ಪಟ್ಟು ದೊಡ್ಡದಾಗಿ ನದಿಯ ರೂಪ ತಾಳಿದ್ರೆ, ನೆರೆ ನೀರು ತೋಟ ಮನೆ ಮಠಗಳನ್ನು ಅಪೋಶನ ತೆಗೆದುಕೊಂಡಿದೆ. ಸೇತುವೆ ಕೊಚ್ಚಿ ಹೋಗಿದೆ. ನೆರೆ ಇಳಿದಿರುವ ಮನೆಗಳ ಹಾಗೂ ಕಾಳಜಿಕೇಂದ್ರದಲ್ಲಿರುವ ಕೆಲವು ಕುಟುಂಬಗಳು ವಾಪಸು ಮನೆಯ ಕಡೆ ತೆರಳಿ ಸ್ವಚ್ಚತೆಗೆ ತೆರಳಿದ್ರೆ, ಇನ್ನು ಉಳಿದವರು ಮನೆ ಮಠ ಕಳೆದುಕೊಂಡು ಉಟ್ಟ ಬಟ್ಟೆ ಬಿಟ್ಟರೆ ಬೇರೆನೂ ಇಲ್ಲ ಎಂದು ಕಾಳಜಿ ಕೇಂದ್ರದಲ್ಲಿ ಬಿಕ್ಕಳಿಸುತ್ತಿದ್ದಾರೆ.
ಇನ್ನು ಪ್ರವಾಹ ಪೀಡಿತ ಕೆಲವೆಡೆ ಜನಜೀವನ ನಿಧಾನ ಗತಿಯಲ್ಲಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಬಂಟ್ವಾಳದಲ್ಲಿ ಶುಕ್ರವಾರ 11.7 ಮೀ. ಅಪಾಯಕಾರಿ ಮಟ್ಟದಲ್ಲಿ ಹರಿದು ಬಂಟ್ವಾಳ ವಿವಿಧ ಭಾಗಗಳಲ್ಲಿ ಪ್ರವಾಹ ಉಂಟಾಗಿದ್ದ ನೇತ್ರಾವತಿ ಭಾನುವಾರ ನೀರಿನಮಟ್ಟವನ್ನು 7.9 ಕ್ಕೆ ಇಳಿಸಿಕೊಂಡು ಹರಿಯುತ್ತಿದ್ದಾಳೆ.
ಜಿಲ್ಲೆಯಾದ್ಯಂತ 3304 ಮಂದಿಯ ರಕ್ಷಣೆ
ಜಿಲ್ಲಾಡಳಿತ ಪ್ರಸ್ತುತ ನೀಡಿರುವ ಮಾಹಿತಿಯಂತೆ ಇಲ್ಲಿಯವರೆಗೆ ಒಟ್ಟು 6 ತಾಲೂಕುಗಳ 95 ಗ್ರಾಮಗಳ 3304 ಮಂದಿಯನ್ನು ರಕ್ಷಿಣೆ ಮಾಡಲಾಗಿದೆ. 14 ಪರಿಹಾರ ಕೇಂದ್ರಗಳಲ್ಲಿ ಅವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. 603ರಷ್ಟು ಮಂದಿ ಪರಿಹಾರ ಕೇಂದ್ರಗಳಲ್ಲಿದ್ದಾರೆ. 14 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಗೆ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದ್ದು, 513 ಮನೆಗಳು(ಭಾಗಶಃ ಹಾಗೂ ಪೂರ್ಣ ಸೇರಿದಂತೆ) ಹಾನಿಯಾಗಿವೆ. 120 ಕಿ.ಮೀ ರಾಷ್ಟ್ರೀಯ ಹೆದ್ದಾರಿ, 175 ಕಿ.ಮೀ ರಾಜ್ಯ ಹೆದ್ದಾರಿ ಹಾಗೂ 152 ಕಿ.ಮೀ ಜಿಲ್ಲಾ ರಸ್ತೆಗಳು, 26 ಮೋರಿ, 3664 ವಿದ್ಯುತ್ ಉಪಕರಣ ಮಳೆಯ ಕಾರಣ ಹಾನಿಗೊಳಗಾಗಿವೆ