ಕಾಸರಗೋಡು,ಆ.12(Daijiworld News/RD): ಭಾರೀ ಮಳೆಗೆ ಐತಿಹಾಸಿಕ ಬೇಕಲ್ ಕೋಟೆಗೂ ಹಾನಿ ಉಂಟಾಗಿದೆ. ಕೋಟೆಯ ಪ್ರವೇಶದ್ವಾರದ ಸಮೀಪದ ಗೋಡೆ ಕುಸಿದು ಬಿದ್ದಿದೆ. ಕೆಂಗಲ್ಲು ಮೂಲಕ ಶತಮಾನದ ಹಿಂದೆ ನಿರ್ಮಿಸಿದ ಈ ಕೋಟೆಯ ಗೋಡೆಯು ಕುಸಿತಗೊಂಡಿದೆ. ಇದರಿಂದ ಕೋಟೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಮಳೆ ಮತ್ತೆ ಬಿರುಸುಗೊಂಡಲ್ಲಿ ಉಳಿದ ಭಾಗ ಕೂಡಾ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ.
ಕಳೆದ ನಾಲ್ಕು ದಿನಗಳ ಕಾಲ ಜಿಲ್ಲೆಯನ್ನು ಕಾಡಿದ ಮಹಾಮಳೆಗೆ ಆದಿತ್ಯವಾರ ಅಲ್ಪ ಬಿಡುವು ಲಭಿಸಿದೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಸೋಮವಾರವು ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಮಳೆ ಪ್ರಮಾಣ ಕುಸಿದ ಹಿನ್ನಲೆಯಲ್ಲಿ ತಗ್ಗು ಪ್ರದೇಶ ಹಾಗೂ ನದಿಗಳ ನೀರು ಅಲ್ಪ ಮಟ್ಟದಲ್ಲಿ ಇಳಿಕೆಯಾಗತೊಡಗಿದೆ. ಜಿಲ್ಲೆಯಲ್ಲಿ 31 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದ್ದು, 1169 ಕುಟುಂಬಗಳ 3,882 ಮಂದಿ ಪುನರ್ವಸತಿ ಕೇಂದ್ರದಲ್ಲಿದ್ದಾರೆ. ಸಂತ್ರಸ್ಥರಿಗೆ ಅಗತ್ಯ ವಸ್ತು, ಆಹಾರ ಹಾಗೂ ಇತರ ವ್ಯವಸ್ಥೆಗೆ ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆ ಮಾಡಿದೆ.
ರಾಜ್ಯ ಆರೋಗ್ಯ ಸಚಿವೆ ಖುದ್ದು ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಅವಲೋಕನಾ ಸಭೆ ನಡೆಸಿದ್ದಾರೆ. ಪುನರ್ವಸತಿ ಕೇಂದ್ರಗಳಿಗೆ ಅಗತ್ಯ ಆಹಾರ, ವಸ್ತುಗಳು ಹರಿದು ಬರತೊಡಗಿದೆ. ಇದಕ್ಕಾಗಿ ಹೊಸದುರ್ಗ ತಾಲೂಕು ಕಚೇರಿ, ಪಡನ್ನಕಾಡ್ ಕೃಷಿ ವಿಜ್ಞಾನ ಕಾಲೇಜು ಮೊದಲಾದೆಡೆ ಕೇಂದ್ರಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆ ಮತ್ತು ದಾನಿಗಳಿಂದ ನೀಡಲಾಗುವ ವಸ್ತುಗಳನ್ನು ಪಡೆಯಲಾಗುತ್ತಿದೆ.